ಚೆನ್ನೈ: ತಮಿಳುನಾಡಿನ ಮಧುರೈನ ಚಕ್ರ ನಗರದಲ್ಲಿ ಫೋಟೋಕಾಪಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಲವ್ ಪ್ರೊಪೊಸಲ್ ಅನ್ನು ತಿರಸ್ಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಅವರ ಮೇಲೆ ದಾರುಣವಾಗಿ ಹಲ್ಲೆ ನಡೆಸಿದ್ದಾನೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
25 ವರ್ಷದ ಲಾವಣ್ಯ ಎಂಬ ಯುವತಿಯೊಬ್ಬರಿಗೆ ಸಿದ್ದಿಕ್ ರಾಜಾ ಎಂಬಾತ ಲವ್ ಮಾಡುವಂತೆ ಕಿರುಕುಳ ನೀಡುತ್ತಿದ್ದ. ಆದರೆ ಲಾವಣ್ಯ ಅದನ್ನು ನಿರಾಕರಿಸಿದ್ದಾರೆ. ಇತ್ತೀಚೆಗೆ ಅವರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಆತ ಅವರೊಂದಿಗೆ ಮಾತನಾಡಬೇಕೆಂದು ಒತ್ತಾಯಿಸಿದ್ದಾನೆ. ಆದರೆ ಅವನೊಂದಿಗೆ ಮಾತನಾಡಲು ಲಾವಣ್ಯ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಅವನು ಅವರ ಮೇಲೆ ಪದೇ ಪದೇ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ.
visual warning
— Mahalingam Ponnusamy (@mahajournalist) November 21, 2024
மதுரைய ஒத்தக்கடையில் ஜெராக்ஸ் கடையில் பணியாற்றும் பெண் காதலிக்க மறுத்ததாக கூறியதால் தாக்கிய இளைஞர் – காவல்துறை விசாரணை pic.twitter.com/TkCO0B35Mc
ನೆರೆಹೊರೆಯ ಅಂಗಡಿಗಳಿಂದ ಜನರು ಯುವತಿಯ ಸಹಾಯಕ್ಕಾಗಿ ಧಾವಿಸಿ ಬಂದು ಅವರನ್ನು ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಒತಕಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಸರ್ಕಾರಿ ಶಾಲೆಯ ಆವರಣದಲ್ಲಿ 26 ವರ್ಷದ ಶಿಕ್ಷಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. 30 ವರ್ಷದ ಮದನ್ ಎಂಬಾತ ಶಿಕ್ಷಕಿ ರಮಣಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಶಾಲಾ ಸಿಬ್ಬಂದಿ ರೂಂನಲ್ಲಿ ಈ ಘಟನೆ ನಡೆದಿದ್ದು, ಅವರು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಲು ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಂಜಾವೂರು ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನ್ಯಾಯಾಲಯ ಸಂಕೀರ್ಣದ ಹೊರಗೆ 30 ವರ್ಷದ ವಕೀಲರ ಮೇಲೆ ವ್ಯಕ್ತಿಯೊಬ್ಬ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನಿಂದ ಆಗ್ನೇಯಕ್ಕೆ 40 ಕಿ.ಮೀ ದೂರದಲ್ಲಿರುವ ಹೊಸೂರು ಪ್ರದೇಶದಲ್ಲಿ ಈ ಕ್ರೂರ ದಾಳಿ ನಡೆದಿದೆ.
ಕೃಷ್ಣಗಿರಿ ದಾಳಿಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಮಿಳುನಾಡು ಬಿಜೆಪಿ, “ತಂಜಾವೂರಿನಲ್ಲಿ ಶಿಕ್ಷಕಿಯ ಹತ್ಯೆ, ಹೊಸೂರು ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಕೊಲೆ ಡಿಎಂಕೆ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನಾರ್ಹವಾಗಿದೆ” ಎಂದಿದೆ. ತಮಿಳುನಾಡು ಬಿಜೆಪಿ ಯುವ ಘಟಕದ ಅಧ್ಯಕ್ಷ ವಿನೋಜ್ ಪಿ ಸೆಲ್ವಂ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಹೆಚ್ಚುತ್ತಿರುವ ಹಿಂಸಾಚಾರ ಪ್ರಕರಣಗಳಿಗೆ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.