Wednesday, 11th December 2024

ಧನಸಹಾಯ ಬಿಡುಗಡೆಗೆ ಒತ್ತಾಯ: ಮನವಿ

ಪಾವಗಡ: 2022 – 23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶಿಲ್ದಾರ್ ವರದರಾಜ್ ರವರಿಗೆ ಮನವಿ ಪತ್ರ ನಿಡಿದ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು.

ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ (ಫಲಾನುಭವಿಗಳ) ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಪ್ರತಿವರ್ಷ ಶೈಕ್ಷಣಿಕ ಸಹಾಯ ಧನ ನೀಡು ತ್ತಿರುವುದು ಸರಿಯಷ್ಟೇ.

ಆದರೆ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಇದುವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡದೇ, ವಿಳಂಬ ಮಾಡು ತ್ತಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ.) ಸಂಘಟನೆಯು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ. ಈ ಸಂಬಂಧ ಕಟ್ಟಡ ಕಾರ್ಮಿಕರ ಮಕ್ಕಳ ಜತೆಗೂಡಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸುತ್ತಿದ್ದೇವೆ. ಈ ಸಾಲಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದರೂ ಶೈಕ್ಷಣಿಕ ಧನಸಹಾಯ ಪಡೆಯಲು ಅರ್ಜಿ ಆಹ್ವಾನಿಸದೇ ಇರುವುದು ಕೂಲಿ ಕಾರ್ಮಿಕರಿಗೆ ಮಾಡುವ ಅನ್ಯಾಯವಾಗಿದೆ.

ಈ ಸಂಬಂಧ ಮಂಡಳಿಯ ಕಾರ್ಯದರ್ಶಿಗಳಾದ ತಮ್ಮ ಬಳಿ ಅನೇಕ ಬಾರಿ ಚರ್ಚಿಸ ಲಾಗಿದೆ. ಹಲವು ತಿಂಗಳುಗಳಿಂದ ಸದ್ಯ ದಲ್ಲೇ ಅರ್ಜಿ ಕರೆಯಲಾಗುವುದು ಎಂದು ಭರವಸೆಯ ಮಾತುಗಳು ಬಂದಿವೆ ಹೊರತು, ಕೊಟ್ಟ ಭರವಸೆಯಂತ ಜಾರಿಯಾಗಿಲ್ಲ. ಏಳಂಬಕ್ಕೆ ತಾವು ಆನೇಕ ಕಾರಣಗಳನ್ನು ನೀಡಿದ್ದೀರಿ, ಎಸ್‌.ಎಸ್‌.ಪಿ ಮೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಳಂಬವಾಗುತ್ತಿದ್ದು, ಅದನ್ನು ಪರಿಹರಿಸುವ ಕಾರ್ಯ ನಡೆದಿದೆ. ಶೀಘ್ರವೇ ಬಗೆಹರಿಯಲಿದೆ ಎಂಬ ಆಶ್ವಾಸನೆಯೂ ನಿಮ್ಮಿಂದ ಸಿಕ್ಕಿತ್ತು. ಆದರೆ ಈ ಹೆಸರಲ್ಲಿ ವಿಳಂಬ ಮಾಡುತ್ತಿರುವುದನ್ನು ಒಪ್ಪಲಾಗದು.

ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳು ಇತ್ತೀಚೆಗೆ ‘ಬೋಗಸ್‌ ಕಾರ್ಡುಗಳ ಹಾವಳಿಯನ್ನು ತಪ್ಪಿಸಬೇಕಿದೆ, ಅಲ್ಲಿಯವರೆಗೆ ಅರ್ಜಿ ಆಹ್ವಾನಿಸುವುದು ಕಷ್ಟ’ ಎಂದು ಮೌಖಿಕವಾಗಿ ಹೇಳಿದ್ದಾರೆ. ಬೋಗಸ್‌ ಕಾರ್ಡುಗಳಿಗೆ ಕಡಿವಾಣ ಹಾಕಬೇಕೆಂಬುದು ನಮ್ಮ ಒತ್ತಾಯವೂ ಆಗಿದೆ. ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಮಂಡಳಿಗೆ ಮನವಿ ಮಾಡಿದ್ದೇವೆ, ಆದರೆ ಬೋಗಸ್‌ ಕಾರ್ಡು ಗಳನ್ನು ತಡೆಗಟ್ಟುವ ನೆಪವೊಡ್ಡಿ ನೈಜ ಕಾರ್ಮಿಕರಿಗೆ ಸೌಲಭ್ಯಗಳನ್ನು ನಿರಾಕರಿಸುವುದನ್ನು ಒಪ್ಪಲಾಗದು.

ಶೈಕ್ಷಣಿಕ ಸಹಾಯಧನವನ್ನು ಹೊರತುಪಡಿಸಿ ಇತರೆ ಎಲ್ಲ ಸೌಲಭ್ಯಗಳು ಚಾಲ್ತಿಯಲ್ಲಿವೆ. 6ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಟ್ಯಾಬ್ ವಿತರಣೆ, ಟೂಲ್ ಕಿಟ್ ವಿತರಣೆ ಯಾವುದೇ ಅಡ್ಡಿಯಿಲ್ಲದೇ ನಡೆಯುತ್ತಿದೆ. ನಿತ್ಯವೂ ಟೆಂಡರ್ ಜಾಹಿರಾತು ದಿನಪತ್ರಿಕೆಗಳಲ್ಲಿ ಪ್ರಕಟ ಆಗುತ್ತಲೇ ಇವೆ, ಇತರೆ ಯಾವುದೇ ಸೌಲಭ್ಯಗಳಿಗೆ ತಡೆ ಹಾಕಿಲ್ಲ ಎಂಬುದು ನೀವೂ ಒಪ್ಪಬಹುದಾದ ಸತ್ಯ. ಹೀಗಿರುವಾಗ ಈ ಎಲ್ಲ ಸವಲತ್ತುಗಳನ್ನು ಬೋಗಸ್‌ ಕಾರ್ಡುದಾರರು ಪಡೆಯುತ್ತಿರಬಹುದಲ್ಲವೇ? ಹೀಗಾಗಿ ಬೋಗಸ್ ಕಾರ್ಡುದಾರರನ್ನು ನಿಯಂತ್ರಿಸಲು ಶೈಕ್ಷಣಿಕ ಸಹಾಯಧನವನ್ನು ತಡೆಹಿಡಿಯಲಾಗಿದೆ ಅಥವಾ ವಿಳಂಬ ಮಾಡಲಾಗುತ್ತಿದೆ ಎಂಬ ಕಲ್ಯಾಣ ಮಂಡಳಿಯ ಮಾನ್ಯ ಕಾರ್ಯದರ್ಶಿಗಳ ವಾದದಲ್ಲಿ ಗಟ್ಟಿತನವಿಲ್ಲ.

ಆದ್ದರಿಂದ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಪಡೆಯಲು ಈ ಕೂಡಲೇ ಅರ್ಜಿ ಆಹ್ವಾನಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಯಾವುದೇ ಸಬೂಬುಗಳನ್ನು ಮುಂದುಮಾಡಿ ಇನ್ನಷ್ಟು ವಿಳಂಬ ಮಾಡುವುದನ್ನು ಯಾವ ಕಾರಣಕ್ಕೂ ಕಾರ್ಮಿಕರು ಸಹಿಸುವುದಿಲ್ಲ. ಕೂಡಲೇ ಇಂದೇ ಅರ್ಜಿ ಆಹ್ವಾನಿಸಬೇಕೆಂದು ಆಗ್ರಹಿಸುತ್ತೇವೆ.

ಇದರ ಜತೆಗೆ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಮಂಡಳಿ ನೀಡಿರುವ ಮಾಹಿತಿ ನೀಡಿರುವ ಪ್ರಕಾರ ರಾಜ್ಯ 60 ಸಾವಿರ ಜನ ಅರ್ಜಿದಾರ ಫಲಾನುಭವಿಗಳಿಗೆ ಶೈಕ್ಷಣಿಕ ಸಹಾಯಧನ ಪಾವತಿ ಆಗಿಲ್ಲ. ಇದಕ್ಕೂ ಎಸ್.ಎಸ್.ಪಿ. ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಹಣ ಪಾವತಿಯಾಗಿಲ್ಲ, ಆದರೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಹಾಯಧನ ದೊರೆಯಲಿದೆ ಎಂಬ ಭರವಸೆ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ ಎಂಬುದನ್ನು ತಮಗೆ ನೆನಪಿಸಲು ಬಯಸುತ್ತೇವೆ, ಬಾಕಿ ಇರಿಸಿಕೊಂಡಿ ರುವ ಫಲಾನುಭವಿಗಳಿಗೆ ಕೂಡಲೇ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸುತ್ತೇವೆ.