Sunday, 15th December 2024

ತಪ್ಪು ಸ್ಕ್ಯಾನಿಂಗ್ ವರದಿ: ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂ. ದಂಡ

ಮಂಡ್ಯ: ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಸೆಂಟರ್‌ ತಪ್ಪು ಸ್ಕ್ಯಾನಿಂಗ್ ವರದಿ ನೀಡಿ ಮಗುವಿನ ಅಸಹಜ ಬೆಳವಣಿಗೆಗೆ ಕಾರಣವಾಗಿದೆ. ಇದೀಗ ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

ಈ ಕುರಿತು ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಮಹೇಶ್ ಅವರು ದೂರಿನ ನೀಡಿದ್ದರು. ಪ್ರಕರಣ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಸಿ.ಎಂ.ಚಂಚಲಾ, ಸದಸ್ಯ ಎಸ್.ವಸಂತಕುಮಾರ ಹಾಗೂ ಮಹಿಳಾ ಸದಸ್ಯೆ ಎಂ.ಎಸ್.ಲತಾ ತೀರ್ಪು ನೀಡಿದ್ದಾರೆ.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧುಶ್ರೀ ಎಂಬುವರು ಗರ್ಭಿಣಿಯಾದ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆಗಾಗಿ ವೈದ್ಯರ ಬಳಿ ಹೋಗಿದ್ದರು. ನಂತರ ಅವರು ವೈದ್ಯರ ಸಲಹೆ ಮೇರೆಗೆ ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ-2 ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿದ್ದರು. ಆ ಸಮಯದಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿದ ವೈದ್ಯರು ಭ್ರೂಣದ ಅಸಹಜ ಬೆಳವಣಿಗೆ ಯನ್ನು ಪತ್ತೆಹಚ್ಚದೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಸ್ಕ್ಯಾನಿಂಗ್ ವರದಿಯನ್ನು ಆಧರಿಸಿ ವೈದ್ಯರು ಸಿಂಧುಶ್ರೀಗೆ ಚಿಕಿತ್ಸೆಯನ್ನು ಮುಂದು ವರೆಸಿದ್ದರು. ಆದರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಿಂಧುಶ್ರೀಗೆ ಹೆರಿಗೆಯಾದಾಗ ಅಸಹಜವಾಗಿ ಬೆಳವಣಿಗೆ ಹೊಂದಿರುವ ಮಗು ಹುಟ್ಟಿದ್ದು ಕಂಡುಬಂದಿದ್ದು, ಇದರಿಂದ ಪೋಷಕರು ಕಂಗಾಲಾದರು. ಆ ಸಮಯದಲ್ಲಿ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಸಮಯದಲ್ಲೇ ನೋಡಿಕೊಳ್ಳಲಿಲ್ಲ ಏಕೆ ಎಂದು ಪೋಷಕರನ್ನು ಪ್ರಶ್ನಿಸಿದ್ದಾರೆ. ಹೀಗೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವುದು ಗೊತ್ತಿಲ್ಲದೆ ಪೋಷಕರು ಆರೋಗ್ಯವಂತ ಮಗುವನ್ನು ಪಡೆಯಲು ಆಗಲಿಲ್ಲ ಎಂದು ಮಾನಸಿಕ ಚಿಂತೆಗೀಡಾಗಿದ್ದಾರೆ ಎನ್ನಲಾಗಿದೆ.