Friday, 20th September 2024

21 couples: ವಿರಸ ಮರೆತು ಒಂದಾದ 21 ಜೋಡಿಗಳು

ತುಮಕೂರು: ಕೌಟುಂಬಿಕ ನ್ಯಾಯಾಲಯದಲ್ಲಿ 21 ಜೋಡಿ ದಂಪತಿಗಳು ವಿರಸ ಮರೆತು ಒಂದಾದ ಅಪರೂಪದ ಘಟನೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಯಂತ್ ಕುಮಾರ್, ಗಂಡ-ಹೆಂಡತಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಬೇಕು,ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸುಗಳನ್ನು ಕೆಡಿಸಿಕೊಂಡು ವಿಚ್ಛೇದನಕ್ಕೆ ಅರ್ಜಿ ಹಾಕಬಾರದು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: Tumkur News: ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೋಂದಣಿ ಆರಂಭ 

ಇಂದಿನ ದಿನಗಳಲ್ಲಿ ಚಿಕ್ಕ ವಿಚಾರಗಳನ್ನೇ ದೊಡ್ಡದಾಗಿ ಮಾಡಿಕೊಂಡು ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ, ಜೀವನಾಂಶ ಇತ್ಯಾದಿಗಳಿಗೆ ಗಂಡ-ಹೆಂಡತಿ ಬರುತ್ತಿರುವುದು ದುರಂತವೇ ಸರಿ,ಹಿರಿಯರ ಮಾರ್ಗದರ್ಶನ ದಲ್ಲಿ ಜೀವನ ನಡೆಸಬೇಕು,ತಂದೆ-ತಾಯಿ ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಿಸಿ, ಬುದ್ಧಿ ಕಲಿಸಿ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿಮಗೆ ಮದುವೆ ಮಾಡಿರುವುದು ನೀವು ವಿಚ್ಛೇದನ ಪಡೆಯುವುದಕ್ಕಲ್ಲ, ಮಕ್ಕಳ ಮುಖ ನೋಡಿಕೊಂಡು,ತಂದೆ-ತಾಯಿಗಳ ಮುಖ ನೋಡಿಕೊಂಡು ಪರಸ್ಪರರು ನಂಬಿಕೆಯಿಂದ ಜೀವನ ನಡೆಸ ಬೇಕು ಎಂದು ದಂಪತಿಗಳಿಗೆ ಬುದ್ಧಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಮುಂದೆ ಒಯ21 ದಂಪತಿಗಳು ಪುನರ್ ಮಿಲನವಾಗಿ ಸಂತೋಷವಾಗಿ ಒಂಟಿಯಾಗಿ ಬಂದು ನ್ಯಾಯಾಲಯದಿಂದ ಜೋಡಿಯಾಗಿ ಹೋದ ಸಂತೋಷ ನಮ್ಮೆಲ್ಲರಿಗೆ ಉಂಟಾಗಿದೆ ಎಂದರು.

ಈ ಸಂದರ್ಭದಲ್ಲಿ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ, ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಮುನಿರಾಜ, 1ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಜಯಪ್ರಕಾಶ್ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.