Friday, 22nd November 2024

LDLC: ಶೇ.60 ರೋಗಿಗಳಿಗೆ ಎಲ್‌ಡಿಎಲ್‌ಸಿ ಅಪಾಯದ ಕುರಿತು ಅರಿವಿಲ್ಲ!

ಕೊಲೆಸ್ಟ್ರಾಲ್ ಪರೀಕ್ಷೆ ಕುರಿತು ಮಹತ್ವದ ಮಾಹಿತಿ ತಿಳಿಸಿದ ಬೆಂಗಳೂರು ವೈದ್ಯರು

ಜಗತ್ತಿನಲ್ಲಿ ಸಂಭವಿಸುತ್ತಿರುವ ಬಹುತೇಕ ಮರಣಗಳಿಗೆ ಪ್ರಮುಖ ಕಾರಣ ಹೃದ್ರೋಗ. ಭಾರತದಲ್ಲಿ ಹೃದಯ ರೋಗದಿಂದ ಇಹಲೋಕ ತ್ಯಜಿಸುತ್ತಿರುವವರ ಸಂಖ್ಯೆ ದೊಡ್ಡದೇ ಇದೆ. ಜಾಗತಿಕ ಹೃದ್ರೋಗ ಸಂಬಂಧಿತ ಸಾವುಗಳ ಐದನೇ ಒಂದು ಭಾಗ ಸಂಭವಿಸುವು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ವರದಿ ಮಾಡಿದೆ.[1] ಪರಿಧಮನಿಯ ಕಾಯಿಲೆ (ಕೊರೋನರಿ ಆರ್ಟರಿ ಡಿಸೀಸ್- ಸಿಎಡಿ) ಜಾಸ್ತಿಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟದ ಮೇಲೆ ನಿಗಾವಹಿಸುವುದು ಬಹಳ ಮುಖ್ಯವಾಗಿದೆ. ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಸಂಸ್ಥೆಯು ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಲು ನಿಯಮಿತವಾಗಿ ಕೊಲೆಸ್ಟ್ರಾಲ್ ತಪಾಸಣೆ ಮಾಡುವುದು ಮತ್ತು ಎಲ್‌ಡಿಎಲ್‌ಸಿ (ಬ್ಯಾಡ್ ಕೊಲೆಸ್ಟ್ರಾಲ್) ಕುರಿತು ಗಮನ ಕೊಡುವುದು ಅತ್ಯಗತ್ಯ ಎಂದು ಹೇಳಿದೆ.

“ಬ್ಯಾಡ್” ಕೊಲೆಸ್ಟ್ರಾಲ್ ಮೇಲೆ ಯಾಕ ಗಮನ ಕೊಡಬೇಕು..
ಕೊಲೆಸ್ಟ್ರಾಲ್ ಅನ್ನುವುದು ರಕ್ತದಲ್ಲಿ ಕಂಡು ಬರುವ ಕೊಬ್ಬಿನ ಅಂಶ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಕೊಲೆಸ್ಟ್ರಾಲ್ ಬಹಳ ಅವಶ್ಯ ಕೂಡ. ಆದರೆ ಇಲ್ಲಿ ಗುಡ್ ಕೊಲೆಸ್ಟ್ರಾಲ್ ಜೊತೆ ಬ್ಯಾಡ್ ಕೊಲೆಸ್ಟ್ರಾಲ್ ಇರುತ್ತದೆ. ಅದನ್ನು ಎಲ್‌ಡಿಎಲ್‌ಸಿ ಅಂತ ಕರೆಯುತ್ತಾರೆ. ಎಲ್‌ಡಿಎಲ್‌ಸಿ ಅಥವಾ “ಬ್ಯಾಡ್” ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಕೊಬ್ಬಿನ ಅಂಶಗಳನ್ನು ಉಂಟು ಮಾಡಬಹುದು. ಕಾಲಕ್ರಮೇಣ ಕೊಬ್ಬಿನ ಅಂಶ ಜಾಸ್ತಿಯಾದಂತೆ ಅವು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಅದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚುತ್ತದೆ. ಸಿಎಸ್ಐ ಮಾರ್ಗಸೂಚಿಗಳ ಪ್ರಕಾರ, ಈಗೀಗ ಎಲ್‌ಡಿಎಲ್‌ಸಿ ಮಟ್ಟ ಹೆಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಉಂಟಾಗುವ ಹೃದ್ರೋಗಕ್ಕೆ ಅದೇ ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಎಲ್‌ಡಿಎಲ್‌ಸಿ ಮಟ್ಟವನ್ನು ಕಡಿಮೆ ಇರುವಂತೆ ನೋಡಿಕೊಳ್ಳುವುದರಿಂದ ಗಂಭೀರ ಹೃದಯ ಸಮಸ್ಯೆ ಉಂಟಾಗಬಹುದಾದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಈ ಕುರಿತು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲ ಜಿಸ್ಟ್ ಡಾ. ರಾಜ್‌ಪಾಲ್ ಸಿಂಗ್ ಅವರು, “ಕೊಲೆಸ್ಟ್ರಾಲ್ ಮಟ್ಟದ ಮೇಲೆ ನಿಗಾ ವಹಿಸುವುದು ಮತ್ತು ಅದನ್ನು ಸೂಕ್ತವಾಗಿ ನಿಭಾಯಿಸುವುದು ಬಹಳ ಮುಖ್ಯ. ಅದರಲ್ಲೂ ವಿಶೇಷವಾಗಿ ಎಲ್‌ಡಿಎಲ್‌ಸಿ ಮೇಲೆ ನಿಗಾವಹಿಸುವುದು ಹೃದ್ರೋಗವನ್ನು ತಡೆಗಟ್ಟಲು ಬಹಳ ಮುಖ್ಯ. ವಿಶೇಷವಾಗಿ ನನ್ನ ಶೇ.60ಕ್ಕಿಂತ ರೋಗಿಗಳು ತಮ್ಮ ಎಲ್‌ಡಿಎಲ್‌ಸಿ ಮಟ್ಟಗಳ ಬಗ್ಗೆ ತಿಳಿದಿರುವುದಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಅದಕ್ಕಿಂತಲೂ ಕಡಿಮೆ ಮಂದಿ ಎಲ್‌ಡಿಎಲ್‌ಸಿ ಗುರಿಗಳ ಬಗ್ಗೆ ಅರಿವು ಹೊಂದಿರುತ್ತಾರೆ. ಈ ಅರಿವಿನ ಕೊರತೆಯಿಂದಲೇ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಎಲ್‌ಡಿಎಲ್‌ಸಿ ಅಪಾಯದ ಮಟ್ಟ ಮೀರುವುದರಿಂದಲೇ ಭಾರತದಲ್ಲಿ ಹೃದಯರಕ್ತನಾಳದ ಕಾಯಿಲೆ ಉಂಟಾಗುತ್ತಿದೆ. ಸಿಎಸ್ಐ ಮಾರ್ಗಸೂಚಿಗಳ ಪ್ರಕಾರ 18ನೇ ವಯಸ್ಸಿನಲ್ಲಿ ಲಿಪಿಡ್ ಪ್ರೊಫೈಲ್ ಸ್ಕ್ರೀನಿಂಗ್‌ಗಳನ್ನು ಪ್ರಾರಂಭಿಸಬೇಕು. ಅದರಿಂದ ಆರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದು. ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದರಿಂದ ಮತ್ತು ಸೂಕ್ತವಾದ ಔಷಧಿಗಳನ್ನು ಪಡೆಯುವ ಮೂಲಕ ರೋಗಿಗಳು ತಮ್ಮ ಎಲ್‌ಡಿಎಲ್‌ಸಿ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಆ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವುದನ್ನು ತಪ್ಪಿಸಬಹುದು” ಎಂದು ಹೇಳುತ್ತಾರೆ.

ನಿಮ್ಮ ಕೊಲೆಸ್ಟ್ರಾಲ್ ಅನ್ನು ಏಕೆ ಪರೀಕ್ಷಿಸಬೇಕು..
ಎಲ್‌ಡಿಎಲ್‌ಸಿ ಮಿತಿ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಅದು ಸಾರ್ವತ್ರಿಕವಲ್ಲ. ನಿಮ್ಮ ವಯಸ್ಸು, ವೈದ್ಯಕೀಯ ಸಂಗತಿಗಳು ಮತ್ತು ಇತರ ಅಪಾಯಕಾರಿ ಅಂಶಗಳ ಆಧಾರದಲ್ಲಿ ಎಲ್‌ಡಿಎಲ್‌ಸಿ ಮಿತಿ ನಿರ್ಧಾರ ಆಗುತ್ತದೆ. ಈ ಕಾರಣದಿಂದಲೇ ನೀವು ಅವಶ್ಯವಾಗಿ “ನಿಮ್ಮ ಎಲ್‌ಡಿಎಲ್‌ಸಿ ಮಟ್ಟದ ಮಿತಿಯನ್ನು ತಿಳಿಯಬೇರು.” ಕೊಲೆಸ್ಟ್ರಾಲ್ ಹಂತಗಳ ಅರ್ಥವೇನು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿಭಾಯಸುವುದು ಹೇಗೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

ವೈಯಕ್ತಿಕ ಎಲ್‌ಡಿಎಲ್‌ಸಿ ಗುರಿ ಇಟ್ಟುಕೊಳ್ಳಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಿ
ಕಾರ್ಡಿ ಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಪ್ರಕಾರ ಎಲ್‌ಡಿಎಲ್‌ಸಿ ಗುರಿ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ವಯಸ್ಸು, ಲಿಂಗ, ವೈದ್ಯಕೀಯ ಇತಿಹಾಸ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಅಂಶಗಳ ಆಧಾರದಲ್ಲಿ ಪ್ರತೀ ವ್ಯಕ್ತಿಗಳಿಗೂ ಎಲ್‌ಡಿಎಲ್‌ಸಿ ಮಿತಿ ಅಥವಾ ಗುರಿ ಬೇರೆಯೇ ಆಗಿರುತ್ತದೆ. ಒಬ್ಬರಿಗೆ ಯಾವುದೋ ಸರಿಯೋ ಇನ್ನೊಬ್ಬರಿಗೆ ಅದು ಸರಿ ಆಗದೇ ಇರಬಹುದು. ಈ ವಿಚಾರದಲ್ಲಿ ಪ್ರತಿಯೊಬ್ಬರ ದಾರಿ, ಗುರಿ ಬೇರೆಯೇ ಆಗಿರುತ್ತದೆ. ಹಾಗಾಗಿ ನೀವು ನಿಮ್ಮ ವೈದ್ಯರ ಜೊತೆ ಸಮಾಲೋಚನೆಯನ್ನು ನಡೆಸಿ ನಿಮ್ಮ ವೈಯಕ್ತಿಕ ಎಲ್‌ಡಿಎಲ್‌ಸಿ ಗುರಿಯನ್ನು ತಿಳಿದುಕೊಳ್ಳಬೇಕು. ಆ ಮಿತಿಯನ್ನು ಮೀರದಂತೆ ಗುರಿ ಇಟ್ಟುಕೊಳ್ಳುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಅನ್ನು ನೀವು ಸೂಕ್ತ ರೀತಿಯಲ್ಲಿ ನಿಭಾಯಿಸಬಹುದು. ವಿಶೇಷವಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ಇತರ ಆರೋಗ್ಯ ಸಮಸ್ಯೆ ಇರುವವರಲ್ಲಿ ಕೊಲೆಸ್ಟ್ರಾಲ್ ನಿರ್ವಹಣೆ ಹೇಗೆ..
ನಿಮಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇದೆ ಅಂತಿಟ್ಟುಕೊಳ್ಳಿ, ಆಗ ನೀವು ನಿಮ್ಮ ಎಲ್‌ಡಿಎಲ್‌ಸಿ ಮೇಲೆ ನಿಗಾವಹಿಸುವುದು ಬೇರೆಯವರಿಗಿಂತ ಹೆಚ್ಚು ಮುಖ್ಯ. ಈಗಾಗಲೇ ನೀವು ಎದುರಿಸುತ್ತಿರುವ ಪರಿಸ್ಥಿತಿಗಳು ನಿಮ್ಮ ಹೃದಯರೋಗದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಕೊಲೆಸ್ಟ್ರಾಲ್ ಮೇಲೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ನಿಮ್ಮ ಚಿಕಿತ್ಸಾ ಯೋಜನೆಯನ್ನು ಚಾಚೂತಪ್ಪದೆ ಪಾಲಿಸುವುದು ಬಹಳ ಒಳ್ಳೆಯದು. ಸಿಎಸ್ಐ ಮಾರ್ಗಸೂಚಿಯು ಈ ವ್ಯಕ್ತಿಗಳಿಗೆ ಆಗಾಗ್ಗೇ ಎಲ್‌ಡಿಎಲ್‌ಸಿ ಮಟ್ಟ ಮಿತಿಯಲ್ಲಿ (ಅಂದಾಜು <70 mg/dl) [2] ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಲಿಪಿಡ್ ಪ್ರೊಫೈಲ್ ಪರೀಕ್ಷೆ ನಡೆಸಲು ಸೂಚಿಸುತ್ತವೆ.

ಇಂದಿನಿಂದಲೇ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅವಶ್ಯ ಮತ್ತು ಅನಿವಾರ್ಯ. ನಿಮ್ಮನ್ನು ಬಾಧಿಸಬಹುದಾದ ಅಪಾಯಕಾರಿ ಅಂಶಗಳನ್ನು ತಿಳಿದುಕೊಳ್ಳುವುದು ಮತ್ತು ನಿಮ್ಮ ವೈಯಕ್ತಿಕ ಎಲ್‌ಡಿಎಲ್‌ಸಿ ಗುರಿ ಇಟ್ಟುಕೊಳ್ಳಲು ವೈದ್ಯರ ಜೊತೆ ಸಮಾಲೋಚನೆ ನಡೆಸುವುದು ಮುಖ್ಯವಾಗಿದೆ. ಅದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದಾಗಿದೆ.

ಈ ವರ್ಷದ ವಿಶ್ವ ಹೃದಯ ದಿನದಂದು ಆರೋಗ್ಯ ಕುರಿತು ಅರಿವು ಹೊಂದುವ, ಚಿಕಿತ್ಸಾ ಯೋಜನೆಯನ್ನು ಪಾಲಿಸುವ ಮತ್ತು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರ ಜೊತೆ ಸಮಾಲೋಚನೆ ನಡೆಸುವ ಕುರಿತಾಗಿ ಪ್ರತಿಜ್ಞೆ ಮಾಡಿ. ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ