Thursday, 12th December 2024

ಕ್ರೂಸರ್ ವಾಹನ ಪಲ್ಟಿ: 7 ಮಂದಿ ಸಾವು

ಬೆಳಗಾವಿ: ತಾಲೂಕಿನ ಕಣಬರಗಿ ಬಳಿ ಭಾನುವಾರ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿ ಸ್ಥಳದಲ್ಲೇ 7 ಮಂದಿ ಮೃತಪಟ್ಟಿದ್ದಾರೆ.

ಕ್ರೂಸರ್ ವಾಹನದಲ್ಲಿ ದಿನಗೂಲಿ ಕೆಲಸಕ್ಕಾಗಿ ಕಾರ್ಮಿಕರು ಗೋಕಾಕ್‌ ತಾಲೂಕಿನಿಂದ ಬೆಳಗಾವಿಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು, ಹಲವರು ಗಾಯ ಗೊಂಡಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಅಕ್ಕತಂಗೇರಹಾಳ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30), ಬಸವರಾಜ ಹನಮನ್ನವರ (51), ಆಕಾಶ ಗಸ್ತಿ (22), ಗೋಕಾಕ್ ತಾಲೂಕಿನ ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30), ಮಲ್ಲಾಪುರ(ಎಸ್‌ಎ) ಗ್ರಾಮದ ಬಸವರಾಜ ಸನದಿ (35) ಮೃತಪಟ್ಟವರು ಎಂದು ತಿಳಿದುಬಂದಿದೆ.

ಈ ಕೂಲಿ ಕಾರ್ಮಿಕರು ದಿನ ನಿತ್ಯ ಮೂರು ವಾಹನಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಮೂರೂ ವಾಹನಗಳ ಮಧ್ಯೆ ನಾ ಮುಂದು ತಾನು ಮುಂದು ಎಂಬ ಪೈಪೋಟಿ ದಿನವೂ ನಡೆಯುತ್ತಿತ್ತು.