Sunday, 15th December 2024

ಚುಂಬಿಸುತ್ತಿರುವ ವಿಡಿಯೋ ವೈರಲ್: ಅಪ್ರಾಪ್ತರ ವಶ

ಮಂಗಳೂರು: ಇಬ್ಬರು ವಿದ್ಯಾರ್ಥಿಗಳು ಚುಂಬಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ನಗರದ ಕಾಲೇಜಿನ 8 ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ ಎಂಟು ಹದಿಹರೆಯದವರನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವೈರಲ್ ಆಗಿದ್ದ ಕಿಸ್ಸಿಂಗ್ ವಿಡಿಯೋವನ್ನು ಆರು ತಿಂಗಳ ಹಿಂದೆ ಚಿತ್ರೀಕರಿಸ ಲಾಗಿದ್ದು, ಇತ್ತೀಚೆಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೊದಲ್ಲಿ ಕಂಡುಬರುವ ಹುಡುಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಹುಡುಗರ ಪರಿಚಯವಿತ್ತು. ವಿಡಿಯೋದಲ್ಲಿರುವ ಒಬ್ಬನ ಜೊತೆ ತನಗೆ ದೈಹಿಕ ಸಂಬಂಧವಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇತರೆ ಹುಡುಗರು ವಿಡಿಯೋ ಬಳಸಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಫೆಬ್ರವರಿಯಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಸೇರಿದ್ದು ಮುತ್ತಿಡುವುದು ‘ಟ್ರೂಥ್ ಅಂಡ್ ಡೇರ್’ ಆಟದ ಭಾಗವಾಗಿತ್ತು.

ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿ ದ್ದಾರೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಮತ್ತು ‘ಅತಿ ಅಶಿಸ್ತು ಮತ್ತು ದುರ್ನಡತೆ’ ಪ್ರಕರಣಗಳನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಹೇಳಿದ್ದಾರೆ.

8 ವಿದ್ಯಾರ್ಥಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.