ತುಮಕೂರು: ಸಾಮಾನ್ಯ ವ್ಯಕ್ತಿ ಆಮ್ ಆದ್ಮಿಯ ಕಿಂಗ್ ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಭಾಸ್ಕರ್ ರಾವ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಆಮ್ ಆದ್ಮಿ ಪಾರ್ಟಿಯ ತುಮಕೂರು ಘಟಕ ಏರ್ಪಡಿಸಿದ್ದ ಮೀಟ್ ದ ಪ್ರೆಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತುಮಕೂರಿನಲ್ಲಿ ಒಂದು ಸಂಸದ ಸ್ಥಾನ, 11ಶಾಸಕರು, 64ಜಿಲ್ಲಾ ಪಂಚಾಯಿತಿ ಸ್ಥಾನ, 174ತಾಲ್ಲೂಕು ಪಂಚಾಯಿತಿ ಸ್ಥಾನ, 5ಸಾವಿರ ಗ್ರಾಮ ಪಂಚಾಯಿತಿ ಸ್ಥಾನಗಳಲ್ಲದೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸ್ಥಾನಗಳಿವೆ.ಈ ಎಲ್ಲಾ ಸ್ಥಾನಗಳಿಗೆ ಆಮ್ ಆದ್ಮಿ ಪಾರ್ಟಿಯ ಮೂಲಕ ಜನಸಾಮಾನ್ಯರೇ ಆಯ್ಕೆಯಾಗಬೇಕಿದೆ ಎಂದರು.
ಬೆಂಗಳೂರು ಸಮೀಪದ ತುಮಕೂರು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರು ಜಿಲ್ಲೆಯಲ್ಲಿ ಪ್ರವಾ ಸೋದ್ಯಮ, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶಕ್ಕೆ ಸಾಕಷ್ಟು ಉತ್ತೇಜನ ನೀಡಬಹುದಾಗಿದೆ. ಆದರೆ ಈವರೆಗೆ ಜಿಲ್ಲೆಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ರಾಜಕಾರಣಿಗಳಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬದ್ದತೆ ಇಲ್ಲ ಎಂದು ದೂರಿ ದರು.
ತುಮಕೂರು ಜಿಲ್ಲೆಯ ಜನ ಉದ್ಯೋಗ ಇತ್ಯಾದಿಗಳಿಗೆ ಬೆಂಗಳೂರಿಗೆ ಬರುವ ಅಗತ್ಯ ಇಲ್ಲ. ಬೆಂಗಳೂರಿನ ಒತ್ತಡ ತಗ್ಗಿಸಲು ತುಮಕೂರು ಶೀಘ್ರವಾಗಿ ಅಭಿವೃದ್ಧಿ ಆಗಬೇಕಿದೆ. ತುಮಕೂರು ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಸಾರಿಗೆ, ಮಹಿಳೆಯರ ಅಭಿವೃದ್ಧಿಗೆ ಬದ್ಧವಾಗಿದೆ. ಇದಕ್ಕೆ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸಾಕ್ಷಿ ಆಗಿವೆ ಎಂದರು.
ಮಾಜಿ ಸಂಸದ ಹಾಗೂ ಎಎಪಿ ಹಿರಿಯ ಮುಖಂಡ ಡಾ. ವೆಂಕಟೇಶ್ ಮಾತನಾಡಿ, ಈ ಹಿಂದೆ ನಾನು ಕೋಲಾರದಲ್ಲಿ ಸಂಸದನಾಗಿ ಆಯ್ಕೆಯಾಗುವ ವೇಳೆ ಜನತಾ ಪರಿವಾರ ಹೊಸ ಭರವಸೆಯಂತೆ ಕಾಣುತಿತ್ತು. ಈಗ ಆಮ್ ಆದ್ಮಿ ಪಾರ್ಟಿಯು ಹೊಸ ಭರವಸೆಯಾಗಿದೆ. ಜನರು ಬದಲಾವಣೆ ಬಯಸಿ ಎಎಪಿ ಆಯ್ಕೆ ಮಾಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಡಾ. ವಿಶ್ವನಾಥ್ ಬಿ. ಎಲ್., ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅತಿಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಗ್ರಾಮ ಸಂಪರ್ಕ ಅಭಿಯಾನ ಆರಂಭಿಸಿದ್ದು, ಈಗಾಗಲೇ ರಾಜ್ಯ ಹಾಗೂ ವಲಯವಾರು ಸಭೆಗಳನ್ನು ನಡೆಸಿದೆ. ಮುಂದೆ ಜಿಲ್ಲೆ, ವಿಧಾನಸಭಾವಾರು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟಿಸಲು ಯೋಜನೆ ಸಿದ್ದವಾಗಿದೆ ಎಂದು ಹೇಳಿದರು.
ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರಾದ ಸುರೇಶ್, ಎಎಪಿ ವಲಯವಾರು ವೀಕ್ಷಕ ಉಮಾಶಂಕರ್ ಮಾತನಾಡಿದರು. ತುಮಕೂರು ನಗರ ಘಟಕದ ಅಧ್ಯಕ್ಷ ಮುನೀರ್ ಅಹಮದ್ ವೇದಿಕೆಯಲ್ಲಿದ್ದರು. ಗುಬ್ಬಿ ವಿಧಾನ ಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಪ್ರಭು ಸ್ವಾಮಿ ಸ್ವಾಗತಿಸಿದರು. ಎಎಪಿ ತುಮಕೂರು ಜಿಲ್ಲಾ ಮಾಧ್ಯಮ ಸಂಯೋಜಕ ಗೋಮಾರದಹಳ್ಳಿ ಪಿ. ಮಂಜುನಾಥ್ ನಿರೂಪಿಸಿದರು.
ಇದೇ ವೇಳೆ 25ಕ್ಕೂಹೆಚ್ಚು ಜನ ಎಎಪಿ ಸೇರ್ಪಡೆಯಾದರು. ನಾಗೇಶ್, ಮಹಾವೀರ್ ಜೈನ್, ಮಾರುತಿ ಸೇರಿದಂತೆ ಹತ್ತು ತಾಲ್ಲೂಕಿನ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.