Sunday, 15th December 2024

Actor Darshan: ದರ್ಶನ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಪೊಲೀಸರ ಮೇಲೆಯೇ ದೂರು

actor darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ ನಲ್ಲಿ ನಟ ದರ್ಶನ್‌ಗೆ (Actor Darshan) ಅನುಕೂಲ ಆಗುವಂತೆ ಚಾರ್ಜ್ ಶೀಟ್ ತಯಾರಿಸಲಾಗಿದೆ ಎಂದು ವೆಂಕಟಚಲಪತಿ ಎಂಬುವರು ಆರೋಪಿಸಿದ್ದಾರೆ.

ಈ ಕುರಿತು ಅವರು ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ. ವೆಂಕಟಚಲಪತಿ ಅವರು ಕಮಿಷನರ್ ದಯಾನಂದ್, ಡಿಸಿಪಿ ಗಿರೀಶ್, ಎಸಿಪಿ ಚಂದನ್ ವಿರುದ್ಧ ಈ ಬಗ್ಗೆ ದೂರು ನೀಡಿದ್ದಾರೆ. ದರ್ಶನ್‌ಗೆ ಕಡಿಮೆ ಪ್ರಮಾಣದ ಶಿಕ್ಷೆ ಕೊಡಿಸುವ ರೀತಿ ಚಾರ್ಜ್ ಶೀಟ್ ಬರೆದಿದ್ದಾರೆ ಎನ್ನುವುದು ಅವರ ಆರೋಪವಾಗಿದೆ.

ಪೊಲೀಸರು ತನಿಖೆ ವೇಳೆ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ವೆಂಕಟಚಲಪತಿ ಕೋರಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ಕುರಿತಂತೆ ಚಾರ್ಜ್​​​ಶೀಟ್​ನಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಚಾರ್ಜ್​ಶೀಟ್​ನಲ್ಲಿ ದರ್ಶನ್ ಅವರು ಹಲವು ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ವಿಚಾರಣೆ ವೇಳೆ ದರ್ಶನ್ ರೇಣುಕಾಸ್ವಾಮಿಯವರ ಮೇಲೆ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ, ಪಟ್ಟಣಗೆರೆ ಶೆಡ್ ನಿಂದ ನಾನು ಹೊರಟು ಬಂದಾಗ ಆತ ಚೆನ್ನಾಗಿಯೇ ಇದ್ದ ಎಂದು ದರ್ಶನ್​ ಹೇಳಿದ್ದಾರೆ ಎನ್ನಲಾಗುತ್ತಿದೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ತೆರಳಿದ್ದರು. ಜೊತೆಯಲ್ಲಿ ವಕೀಲರು ಕೂಡ ಆಗಮಿಸಿದ್ದರು. ಚಾರ್ಜ್​ ಶೀಟ್ ಸಲ್ಲಿಕೆ ಹಾಗೂ ಕೇಸ್ ವಿಚಾರವಾಗಿ ವಕೀಲರು ನಟ ದರ್ಶನ್ ಅವರಿಂದ ಹಲವು ಮಾಹಿತಿ ಪಡೆದಿದ್ದಾರೆ.

24 ನಿಮಿಷಗಳ ಕಾಲ ದರ್ಶನ್​​ ಜೊತೆ ವಿಜಯಲಕ್ಷ್ಮಿ ಮತ್ತು ವಕೀಲರು ಮಾತನಾಡಿದರು. ಪತ್ನಿ ತಂದ ಕಾಮಾಕ್ಯ ದೇವರ ಪ್ರಸಾದ, ಡ್ರೈ ಫ್ರೂಟ್, ಬಟ್ಟೆ ಬ್ಯಾಗನ್ನು ತೆಗೆದುಕೊಂಡು ದರ್ಶನ್‌ ಸೆಲ್​ ಕಡೆಗೆ ತೆರಳಿದರು. ದರ್ಶನ್ ಭೇಟಿ ಬಳಿಕ ವಕೀಲ ಸುನಿಲ್ ಮಾಧ್ಯಮಗಳ ಜೊತೆ ಮಾತಾಡಿದ್ದು, ಕೇಸ್ ಬಗ್ಗೆ ದರ್ಶನ್ ಜೊತೆ ಚರ್ಚೆ ಮಾಡಿದ್ದೇವೆ. ಚಾರ್ಜ್ ಶೀಟ್ ನಲ್ಲಿ ಕೆಲವು ಅನುಮಾನಗಳಿದ್ದವು ಈ ಬಗ್ಗೆ ದರ್ಶನ್ ಜೊತೆ ಚರ್ಚೆ ನಡೆಸಿ ಕ್ಲೀಯರ್ ಮಾಡಿಕೊಂಡಿದ್ದೇವೆ. ಜಾಮೀನು ಅರ್ಜಿ ಸಲ್ಲಿಸುವ ಸಂಬಂಧ ಹಿರಿಯ ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿ: Actor Darshan: ದರ್ಶನ್‌ ಆ್ಯಂಡ್‌ ಗ್ಯಾಂಗ್‌ಗೆ ಮತ್ತೊಂದು ದಿನ ನ್ಯಾಯಾಂಗ ಬಂಧನ ವಿಸ್ತರಣೆ