Wednesday, 9th October 2024

ಅಡಕೆ ಮರಗಳ ಮಾರಣಹೋಮ: ತಹಶೀಲ್ದಾರ್ ವಿರುದ್ಧ ಹಿಡಿ ಶಾಪ ಹಾಕಿದ ರೈತರು

ಗುಬ್ಬಿ: ತಾಲೂಕಿನ ಕಡಬ ಹೋಬಳಿ ಕೆ. ರಾಂಪುರ ಗ್ರಾಮದ ರಂಗಯ್ಯ ಬಿನ್ ಚಿಕ್ಕಣ್ಣ ಎಂಬುವರಿಗೆ ಸೇರಿದ ಸರ್ವೆ ನಂಬರ್ 07 ರಲ್ಲಿ ಸುಮಾರು ಎರಡು ಸಾವಿರ ಅಡಿಕೆ ಮರಗಳಿದ್ದು ಜಮೀನಿನ ಮಧ್ಯಭಾಗದಲ್ಲಿ ಕರಾಬು ಹಳ್ಳ ನೀರು ಕಾಲುವೆ ಹಾದುಹೋಗಿದೆ ಎಂದು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕಾದ ಅಧಿಕಾರಿಗಳೆ ಅಡಿಕೆ ಮರಗಳನ್ನು ಕಡಿದು ಹಾಕಿಸಿದ್ದಾರೆಂದು ಜಮೀನಿನ ರೈತ ಕುಟುಂಬದವರು ಅಳಲು ತೋಡಿಕೊಂಡರು.
ರೈತ ಮಹಿಳೆ ಮಂಜಮ್ಮಮಾತನಾಡಿ ಸುಮಾರು 25, 30 ವರ್ಷಗಳ ಕಾಲ ಮಕ್ಕಳಂತೆ ಪೋಷಿಸಿ ಬೆಳೆಸಿದ ಚೆನ್ನಾಗಿ ಫಸಲು ಬಿಡುತ್ತಿದ್ದ ಮರಗಳನ್ನು ಕಡಿದು ಹಾಕಿದ್ದಾರೆ. ಜಮೀನಿನ ವಿಚಾರವಾಗಿ ನ್ಯಾಯಾಲಯದ ಹಂತದಲ್ಲಿ ಪ್ರಕರಣ ನಡೆಯುತ್ತಿದ್ದು. ಕುಟುಂಬದ ಗಮನಕ್ಕೆ ತರದೆ ಅಡಕೆ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಕಣ್ಣೀರು ಹಾಕಿದರು.
 ದೊಡ್ಡ ಕುಟುಂಬವಾದ ಕಾರಣ ಯಾರು ಸಹ ವಿಭಾಗ ಮಾಡಿ ಕೊಳ್ಳದೆ ಎಲ್ಲರೂ ಸಹ ಒಟ್ಟು ಕುಟುಂಬದಲ್ಲಿ ಅಡಕೆ ಮರಗಳನ್ನು ಬೆಳೆಸಿದ್ದೆವು.
ನಮ್ಮ ಗಮನಕ್ಕೆ ತರದೆ ತಹಶೀಲ್ದಾರ್ ಅವರು ಅಡಿಕೆ ಮರಗಳನ್ನು ಕಡಿಸಿರುವುದು ಅಪಾರ ಪ್ರಮಾಣದ ನಷ್ಟದ ಜೊತೆಗೆ ನೋವನ್ನು ತಂದು ಒಡ್ಡಿದ್ದಾರೆ ಎಂದು ಕುಟುಂಬಸ್ಥರಾದ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.