ತುಮಕೂರು: ಅಪರ ಜಿಲ್ಲಾಧಿಕಾರಿಯಾಗಿ(ಎಡಿಸಿ) ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಲ್ಲಪ್ಪ, ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಾರ್ವಜನಿಕ ಸೇವೆ ಮಾಡಲು ಮುಂದಾಗಿದ್ದಾರೆ.
ಅವಿರೋಧ ಆಯ್ಕೆ
ಆರ್. ಅಲ್ಲಪ್ಪ ಸೇವೆಯಿಂದ ನಿವೃತ್ತರಾದ ನಂತರ ತಾಲೂಕಿನ ಲೋಕಮ್ಮನಹಳ್ಳಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಟಿ.ಆರ್.ಕೆಂಪೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆರ್.ಅಲ್ಲಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಲ್ಲಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.17 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 9 ಸದಸ್ಯರು ಭಾಗವಹಿಸಿದ್ದರು.
ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ವನಮಾಲ, ಸದಸ್ಯರಾದ ಗಂಗಾಧರಯ್ಯ, ಕೃಷ್ಣಪ್ಪ, ಎಂ.ಬಿ.ರೇಣುಕಪ್ಪ, ಪುಟ್ಟಲಕ್ಷ್ಮಮ್ಮ, ಕೋಮಲ, ಮಂಜುಳ, ಕೆಂಪೇಗೌಡ ಪಿಡಿಒ ಸುರೇಶ್ ಮುಖಂಡರಾದ ಶಶಿಧರ್, ಕಾಂತರಾಜು, ಮುಖಂಡರು ಅಭಿನಂದಿಸಿದರು.
ಫೋಟೋ : ನಿವೃತ್ತ ಎಡಿಸಿ ಅಲ್ಲಪ್ಪ ಗ್ರಾಮ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.