Tuesday, 10th September 2024

ಅತ್ತೆ-ಮಾವನ ವಿರುದ್ಧ ಜೀವನಾಂಶದ ಹಕ್ಕು ಸಾಧಿಸಲು ಸಾಧ್ಯವಿಲ್ಲ

ಬೆಂಗಳೂರು: ಪತಿಯ ನಿಧನದ ನಂತರ ಸೊಸೆ, ಅತ್ತೆ-ಮಾವನ ವಿರುದ್ಧ ಜೀವನಾಂಶದ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಸೊಸೆಗೆ ಜೀವನ ನಿರ್ವಹಣೆಗಾಗಿ ಹಣ ನೀಡುವಂತೆ ಅತ್ತೆ-ಮಾವನಿಗೆ ಆದೇಶಿಸಿದ್ದ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ತೀರ್ಪು ರದ್ದುಗೊಳಿಸಿದೆ.

ಪತಿಯ ನಿಧನದ ಬಳಿಕ ಪತ್ನಿ (ಸೊಸೆ) ಹಾಗೂ ಮಕ್ಕಳ ಕುರಿತು ಅತ್ತೆ ಮಾವ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಜೀವನ ನಿರ್ವಹಣೆಗಾಗಿ ಅತ್ತೆ-ಮಾವನ ಬಳಿ ಜೀವನಾಂಶ ಕೋರಿದ್ದಾರೆ. ಇದು ಆಕೆ ಜೀವನ ನಡೆಸಲು ಅಗತ್ಯವೂ ಹೌದು. ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುವುದು ಸೂಕ್ತ. ಈ ನಿಟ್ಟಿನಲ್ಲಿ ಮರುಪರಿಶೀಲನಾ ಅರ್ಜಿ ವಜಾಗೊಳಿಸುವಂತೆ ಪ್ರತಿವಾದಿ ಪರ ವಕೀಲರು ಮನವಿ ಮಾಡಿದರು.

ವಾದ-ಪ್ರತಿವಾದದ ಬಳಿಕ ನ್ಯಾಯಲಯವು ಅರ್ಜಿದಾರರಿಂದ ನ್ಯಾಯಾಲಯಕ್ಕೆ ಸಲ್ಲಿಕೆಯಾದ ದಾಖಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿತು. ಬಳಿಕ ಸಿಆರ್‌ಪಿಸಿ ಸೆಕ್ಷನ್ 125 ಅಡಿ ಸೊಸೆಯು ಅತ್ತೆ-ಮಾವನ ವಿರುದ್ಧ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ರದ್ದುಪಡಿಸಿ, ಪರಿಷ್ಕರಣೆ ಅರ್ಜಿ ಅಂಗೀಕರಿಸುವಂತೆ ಆದೇಶಿಸಿತು.

ಅರ್ಜಿದಾರರು ಮಗನ ನಿಧನದ ನಂತರ ಸೊಸೆ ತನಗೆ ಹಾಗೂ ತನ್ನ ನಾಲ್ಕು ಮಕ್ಕಳಿಗೆ ಮಾಸಿಕ ಜೀವನಾಂಶ ನೀಡುವಂತೆ ಕೋರಿ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಮಾಸಿಕ 20,000 ಹಾಗೂ ಮಕ್ಕಳಿಗೆ 5,000 ರೂ. ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆಕೆಯ ಅತ್ತೆ-ಮಾವ ಹೈಕೋರ್ಟ್ ಮೇಟ್ಟಿಲೇರಿದ್ದರು.

ಆರ್‌ಪಿಸಿ ಸೆಕ್ಷನ್ 125ರ ಅನ್ವಯ ಸೊಸೆಗೆ ಹಾಗೂ ಮೊಮ್ಮಕ್ಕಳಿಗೆ ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿದ್ದ ತೀರ್ಪು ಪ್ರಶ್ನಿಸಿ ಮೃತ ಪತಿಯ ಅಪ್ಪ ಅಮ್ಮ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Leave a Reply

Your email address will not be published. Required fields are marked *