Saturday, 26th October 2024

ರಾಜ್ಯವನ್ನು ಏಡ್ಸ್ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ : ಡಾ.ಕೆ.ಸುಧಾಕರ್

ಪ್ರಾಣೇಶ್ ಹಾಸ್ಯ ಕಾರ್ಯಕ್ರಮ, ವಿದ್ಯಾರ್ಥಿಗಳ ಜಾಥಾ, ಜಾನಪದ ಕಲಾತಂಡಗಳ ಮೆರಗು

ಚಿಕ್ಕಬಳ್ಳಾಪುರ: ಜಿಲ್ಲೆಯಯೂ ಸೇರಿದಂತೆ ರಾಜ್ಯವನ್ನು ಏಡ್ಸ್ ಮುಕ್ತವಾಗಿಸಿ ಆರೋಗ್ಯವಂತ ಸಮಾಜ ಕಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರ  ಜಿಲ್ಲಾಸ್ಪತ್ರೆ ಆವರಣದಲ್ಲಿ ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ಯೋಗದಲ್ಲಿ  ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಡೀ ದೇಶದಲ್ಲಿಯೇ ಏಡ್ಸ್ ಸೋಂಕು ನಿಯಂತ್ರಣಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ೨೦೩೦ರ ವೇಳೆಗೆ ರಾಜ್ಯ ಎಚ್‌ಐವಿ ಮುಕ್ತ ಕರ್ನಾಟಕ ವಾಗಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ಏಡ್ಸ್ ತಡೆಗಟ್ಟುವಿಕೆಗಾಗಿ ಓಂಬುಡ್ಸಮನ್ ನೇಮಿಸಿದ ಎರಡನೇ ರಾಜ್ಯ ಕರ್ನಾಟಕವಾಗಿದೆ. ಸಂಪೂರ್ಣ ಏಡ್ಸ್ ಮುಕ್ತ ರಾಜ್ಯವಾಗಿಸಲು ಎಲ್ಲರೂ ರಾಜ್ಯ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.

ಎಚ್.ಐ.ವಿ ಸೋಂಕಿತರ ತಾರತಮ್ಯ ಶಿಕ್ಷಾರ್ಹ
ಎಚ್.ಐ.ವಿ ಸೋಂಕಿತರನ್ನು ತಾರತಮ್ಯದಿಂದ ನೋಡುವುದನ್ನು ತಪ್ಪಿಸಲು ಮತ್ತು ಸೋಂಕು ನಿಯಂತ್ರಣಕ್ಕಾಗಿ ತೊಡಗಿಸಿಕೊಂಡಿರುವ ಅಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಅರೋಗ್ಯ ಸಚಿವರು, ಸೋಂಕಿತರನ್ನು ಕಳಂಕ ಅಥವಾ ತಾರತಮ್ಯದಿಂದ ನೋಡುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ ಎಂದರು.

೨ ವರ್ಷ ಜೈಲು ೧ ಲಕ್ಷ ದಂಡ
ಸೋAಕಿತರನ್ನು ತಾರತಮ್ಯದಿಂದ ನೋಡಿದರೆ ಎರಡು ತಿಂಗಳಿAದ, ಎರಡು ವರ್ಷದ ವರೆಗೆ ಜೈಲು ಸಜೆ ಅಥವಾ ಒಂದು ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದ್ದು, ಈ ಎಲ್ಲ ಕ್ರಮಗಳಿಂದಾಗಿ ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಅಲ್ಲದೆ ಸೋಂಕಿನ ಬಗ್ಗೆ ಅರಿವು ಕಾರ್ಯಕ್ರಮಗಳು ಹೆಚ್ಚಾಗಿರುವುದರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಇದೇ ರೀತಿಯಲ್ಲಿ ಮುಂದುವರಿಯದಿದ್ದರೆ ಮತ್ತೆ ಹೆಚ್ಚಾಗುವ ಆತಂಕ ಇದೆ ಎಂದು ಹೇಳಿದರು.

ಹೆಚ್.ಐ.ವಿ ಸೋಂಕಿನ ಬಗ್ಗೆ ಉದಾಸೀನ ಮಾಡುವ ಕಾಯಿಲೆ ಇದಲ್ಲ, ನಿಯಂತ್ರಣಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು, ರಾಜ್ಯದಲ್ಲಿ ಸೋಂಕನ್ನು ಶೂನ್ಯಕ್ಕೆ ತರುವ ಪ್ರಯತ್ನ ಮುಂದುವರಿಯಬೇಕು ೨೦೩೦ರ ಒಳಗೆ ಸೋಂಕನ್ನು ರಾಜ್ಯದಿಂದ ಓಡಿಸುವ ಕೆಲಸವಾಗಬೇಕು ಎಂದು ಅವರು ಸಲಹೆ ನೀಡಿದರು.

ಸೋಂಕಿತರನ್ನು ಯಾವುದೇ ತಾರತಮ್ಯದಿಂದ ನೋಡದೆ ಸಮಾನಗೊಳಿಸುವುದು ಈ ವರ್ಷದ ಘೋಷವಾಕ್ಯವಾಗಿದೆ. ಅಸಮಾ ನತೆ ಪರಿಹರಿಸೋಣ, ಏಡ್ಸ್ ಕೊನೆಗಾಣಿಸೋಣ ಎಂದು ಪ್ರಚುರ ಪಡಿಸಲಾಗುತ್ತಿದೆ. ಎಚ್.ಐ.ವಿ. ಯೊಂದಿಗೆ ಬದುಕುತ್ತಿರುವವರಿಗೆ ಬೆಂಬಲ ಸೂಚಿಸುವ ದಿನ ಇದು, ಅದೇ ರೀತಿಯಲ್ಲಿ ಎಚ್.ಐ.ವಿ ಯಿಂದ ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ದಿನವೂ ಆಗಿದೆ ಎಂದು ಸಚಿವರು ಹೇಳಿದರು.

ಹೆಚ್.ಐ.ವಿ ಸೋಂಕಿನ ಹಿನ್ನೆಲೆ
ಸೋಂಕಿನ ತಡೆಯುವಿಕೆ ಬಗ್ಗೆ ಅರಿವು ಮೂಡಿಸಲು ತೀವ್ರ ಶ್ರಮಿಸಲಾಗುತ್ತಿದೆ, ೭ ಜಿಲ್ಲೆಗಳಲ್ಲಿ ಈ ಸೋಂಕು ಹೆಚ್ಚಿದೆ. ರಾಜ್ಯದಲ್ಲಿ ಎಚ್‌ಐವಿ ಸೋಂಕು ಹರಡುವುದು ಮತ್ತು ಇದರಿಂದ ಸಾವು ಎರಡನ್ನೂ ಶೂನ್ಯಕ್ಕೆ ತರಲು ಶ್ರಮಿಸಲಾಗುತ್ತಿದೆ. ಅದೇ ರೀತಿಯಲ್ಲಿ ಸೋಂಕು ಹರಡಿದ ವ್ಯಕ್ತಿಯ ವಿರುದ್ಧ ತಾರತಮ್ಯವನ್ನು ಶೂನ್ಯಕ್ಕೆ ತರಲು ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ ೩.೭೩ ಲಕ್ಷ ಮಂದಿ ಸೋಂಕಿತರಿದ್ದಾರೆ, ಇವರಲ್ಲಿ ೧.೭೬ ಲಕ್ಷ ಮಂದಿ ಸ್ವಷ್ಟ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೊರ ರಾಜ್ಯಗಳವರಾಗಿ ಹೋಗಿರುವುದು ಮತ್ತು ಮೃತಪಟ್ಟಿರುವವರೂ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ನಗರದಲ್ಲಿ ಐ.ಇ.ಸಿ ಜಾಗೃತಿ ಮಳಿಗೆಗಳ ಮೂಲಕ  ಏಡ್ಸ್ ಮಹಾಮಾರಿಯ ನಿರ್ಮೂಲನೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.

ನಗರದ ಜೂನಿಯರ್ ಕಾಲೇಜು ಆವರಣದಿಂದ ಜಿಲ್ಲಾಸ್ಪತ್ರೆ ವರೆಗೆ ನಡೆದ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ನ್ಯಾಯಾಧೀಶ ಲಕ್ಷ್ಮೀಕಾಂತ್ ಜೆ. ಮಿಸ್ಕಿನ್ ಚಾಲನೆ ನೀಡಿದರು. ಜಾಗೃತಿ  ಜಾಥಾ ಕಾರ್ಯಕ್ರಮವು ಜೂನಿಯರ್ ಕಾಲೇಜಿನ ಆವರಣದಿಂದ  ಬಿ.ಬಿ  ರಸ್ತೆ  ಮೂಲಕ ನಗರದ ಪ್ರಮುಖ ರಾಜಬೀದಿಗಳ ಮೂಲಕ ಘೋಷಣೆ ಮೊಳಗಿಸುತ್ತಾ ಜಿಲ್ಲಾಸ್ಪತ್ರೆವರೆಗೆ ಸಾಗಿತು. ಶಾಲಾ  ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಎಚ್.ಐ.ವಿ ಸೋಂಕು ನಿಯಂತ್ರಣಾ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಸಾಗಿದರು. ಕಲಾತಂಡಗಳು ಸಹ ಜಾಥಾಗೆ ಸಾಥ್ ನೀಡಿದವು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ ಮಹಾಮನಿ ಅವರಿಂದ ಎಚ್.ಐ.ವಿ ಸೋಂಕು ನಿಯಂತ್ರಣ ಕುರಿತು ಹಾಸ್ಯದ ಮೂಲಕ ಜಾಗೃತಿ ಮೂಡಿಸಿ ಸಾರ್ವಜನಿಕರು ಹಾಸ್ಯದ ಹೊನಲಿನಲ್ಲಿ ತೇಲುವಂತೆ ಮಾಡಿದರು. ಎಚ್.ಐ.ವಿ ಸೋಂಕಿತರನ್ನು ತಾರತಮ್ಯ ಭಾವದಿಂದ ನೋಡುವುದು ತಪ್ಪು ಎನ್ನುವುದನ್ನು ಮನಮುಟ್ಟುವ ಹಾಗೆ ಕಲಾವಿದರು ತಿಳಿಸಿಕೊಟ್ಟರು. ವೈದ್ಯರು, ಸಿಬ್ಬಂದಿ, ಆರೋಗ್ಯ ಕಾರ್ಯಕರ್ತೆಯರು ಕಾರ್ಯದ ಒತ್ತಡದಿಂದ  ಹೊರಬಂದು ನಕ್ಕು ನಲಿದರು.
ಕಾರ್ಯಕ್ರಮದಲ್ಲಿ ನರೆದಿದ್ದ ಎಲ್ಲರಿಗೂ ಹೆಚ್.ಐ.ವಿ ಸೋಂಕು ನಿಯಂತ್ರಣದಲ್ಲಿ ಸ್ವಯಂ ಪಾಲ್ಗೊಳ್ಳುವ ಬಗ್ಗೆ ಸಂಕಲ್ಪವನ್ನು ಬೋಧಿಸಲಾಯಿತು. ಈ ವೇಳೆ ಏಡ್ಸ್ ಮಹಾಮಾರಿ ನಿರ್ಮೂಲನೆ ಕುರಿತು ಕರಪತ್ರಗಳು ಮತ್ತು ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಂಡ ವೈದ್ಯರನ್ನು ಎ.ಆರ್.ಟಿ. ಕೇಂದ್ರದ  ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕಿ ಡಾ. ಇಂದುಮತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್ ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಕೆ.ಲೀಲಾವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಿ.ಎಲ್.ನಾಗೇಶ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಯಲ್ಲ ರಮೇಶ್ ಬಾಬು, ಹಾಸ್ಯ ಕಲಾವಿದರಾದ ಪ್ರಾಣೇಶ್, ಬಸವರಾಜ ಮಹಾಮನಿ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

೧ಸಿಬಿಪಿಎಂ೨ : ಚಿಕ್ಕಬಳ್ಳಾಪುರ ನಗರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ವಿಶ್ವಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ನಿವಾರಣೆಗೆ ಕ್ರಮವಹಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
೧ಸಿಬಿಪಿಎಂ೨: ಇದೇ ವೇಳೆ ನಗರದ ಜೂನಿಯರ್ ಕಾಲೇಜು ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.