Thursday, 19th September 2024

Ambedkar Statue: ಶಾಲಾ ಅವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತ್ಯಕ್ಷ : ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ

ಚಿಂತಾಮಣಿ: ರಾತ್ರೋ ರಾತ್ರಿ ಸರ್ಕಾರಿ ಶಾಲಾ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಸ್ಥಾಪಿಸಿರುವ ಘಟನೆ  ಚಿಂತಾಮಣಿ ನಗರದಲ್ಲಿ ಕಂಡು ಭಾನುವಾರ ಬೆಳಕಿಗೆ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಿಂತಾಮಣಿ ನಗರದ ಹಳೇ ಕೆನರಾ ಬ್ಯಾಂಕ್ ಪಕ್ಲದಲ್ಲಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ಥಿಯಲ್ಲಿದ್ದುದನ್ನು ಕಂಡ ಅನಿತಾ ಚಾರಿಟಬಲ್ ಟ್ರಸ್ಟ ಹಾಗೂ ಲಿಯೋ ಕ್ಲಬ್ ಮಾರ್ಗ ಅಧ್ಯಕ್ಷ ನವೀನ್.ಜಿ. ಕೃಷ್ಣರವರು ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪಣತೊಟ್ಟಿದ್ದರು. ಶಿಕ್ಷಣ ಇಲಾಖೆಯ ನಿಯಮಗಳ ಅನುಸಾರ ಸದರಿ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಸುಮಾರು ಒಂದುವರೇ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಶಾಲೆಯ ಕಟ್ಟಡ ನವೀಕರಣದ ಜತೆಗೆ ಶಾಲಾವರಣದಲ್ಲಿ ಉದ್ಯಾನವನ ನಿರ್ಮಾಣದ ಜತೆಗೆ ಅಂಬೇಡ್ಕರ್ ಪುತ್ಥಳಿ  ಇಡಲು ತೀರ್ಮಾನಿಸಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಮುಗಿಸಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವಾಗಲೇ  ಶಾಲಾವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಇಡಬಾರದೆಂದು ಬಿಇಒ ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಡಿಡಿಪಿಐ ಅನುಮತಿ ನಿರಾಕರಿಸಿದ್ದರು.

ಇದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೆ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾAತರ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳಿಯ ಶಾಸಕ ಡಾ.ಎಂ.ಸಿ ಸುಧಾಕರ್ ರವರಿಗೆ ಹಾಗೂ ಜಿಲ್ಲಾದ್ದಿಕಾರಿಗಳಿಗೆ ಮನವಿ  ಸಲ್ಲಿಸಿ ಸೆಪ್ಟೆಂಬರ್ ೧೨ ಕ್ಕೆ ಚಿಂತಾಮಣಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಆದರೆ ಭಾನುವಾರ ರಾತ್ರಿ ಇದ್ದಕ್ಕಿದ್ದ ಹಾಗೆ ಯಾರೋ ಸರ್ಕಾರಿ ಶಾಲಾವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪಿಸಿ ಹೋಗಿದ್ದಾರೆ.ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಸರ್ಕಾರಿ ಶಾಲಾವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಇಟ್ಟಿರುವುದನ್ನು ತಿಳಿದ ಚಿಂತಾಮಣಿ ನಗರ ಠಾಣೆಯ ಪೊಲೀಸರು, ಅಂಬೇಡ್ಕರ್ ಪುತ್ಥಳಿ ಕಾಣಿಸದಂತೇ ಪೆಂಡಾಲ್ ಸೈಡ್ ವಾಲ್‌ನ್ನು ಕಟ್ಟಿರುವುದಲ್ಲದೇ ಶಾಲೆಯ ಬಳಿ ಯಾರು ಹೋಗದಂತೆ ಬ್ಯಾರಿಕೇಡ್‌ಗಳನ್ನು ಆಳವಡಿಸಿದ್ದಾರೆ.

ಅಂಬೇಡ್ಕರ್ ಪುತ್ಥಳಿ ಇಡುವ ವಿಚಾರವಾಗಿ ಹಲವು ದಿನಗಳಿಂದ ಪರ  ಮತ್ತು ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ  ಶಾಲೆಯ ಬಳಿ ಮುಂಜಾಗ್ರತಕ್ರಮವಾಗಿ  ಸಿಸಿಟಿವಿ ಕ್ಯಾಮಾರಗಳನ್ನು ಆಳವಡಿಸಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಹಾಗೂ ಶಾಲೆಯ ಮುಖ್ಯ ಶಿಕ್ಷಕರ ವೈಪಲ್ಯತೆ ಎದ್ದು ಕಾಣುತ್ತಿರುವುದಕ್ಕೆ ದಲಿತ ಪರ ಸಂಘಟನೆಗಳ ಮುಖಂಡರು ಬಿಇಓ ಹಾಗೂ ಮುಖ್ಯ ಶಿಕ್ಷಕರ ವಿರುದ್ದ ಅಸಮಾ ದಾನ ಹೊರಹಾಕಿದ್ದಾರೆ.

ಸರ್ಕಾರಿ ಶಾಲಾವರಣದಲ್ಲಿ ಅಂಬೇಡ್ಕರ್ ಪುತ್ಥಳಿ ಇಡಲು ಪರ ಮತ್ತು ವಿರೋದ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ  ಅಂಬೇಡ್ಕರ್ ಪುತ್ಥಳಿ ಇಟ್ಟು ಹೋಗಿದ್ದಾರೆ ಎಂಬುದು ಪೋಲಿಸರ ತನಿಖೆಯಿಂದ ಮಾತ್ರ ಹೊರಬರಬೇಕಾಗಿದೆ.