Thursday, 12th December 2024

ಇಂದು ಆಂಧ್ರ ಪ್ರದೇಶಕ್ಕೆ ’ಭಾರತ್‌ ಜೋಡೊ ಯಾತ್ರೆ’ ಪ್ರವೇಶ

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಶುಕ್ರವಾರ ಆಂಧ್ರ ಪ್ರದೇಶ ವನ್ನು ಪ್ರವೇಶಿಸಲಿದೆ.

ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಬೆಂಬಲಿಗರ ಜೊತೆ ರಾಹುಲ್‌ ಗಾಂಧಿ ಶುಕ್ರವಾರ ಬೆಳಿಗ್ಗೆ ಕಾಲ್ನಡಿಗೆ ಆರಂಭಿಸಿದ್ದಾರೆ.

ಶುಕ್ರವಾರ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಒಬಲಾಪುರಂನಲ್ಲಿ ರಾಹುಲ್‌ ಗಾಂಧಿ ಅವರು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

‘ಭಾರತ್‌ ಜೋಡೊ ಯಾತ್ರೆ ಹೋದಲೆಲ್ಲ ಪ್ರೀತಿಯ ಮಹಾಪೂರವೇ ಹರಿದು ಬರುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕ ದಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮತ್ತೊಂದು ಮೈಲುಗಲ್ಲಾಗುವ ದಿನ ನಮ್ಮ ಮುಂದಿದೆ. ಆಂಧ್ರ ಪ್ರದೇಶ ದಲ್ಲಿನ ನಮ್ಮ ಚುಟುಕು ಯಾತ್ರೆಯಲ್ಲಿ ಪಾಲ್ಗೊಳ್ಳಿ’ ಎಂದು ಯಾತ್ರೆ ತಂಡ ಟ್ವೀಟ್‌ ಮಾಡಿದೆ.

ಬೆಳಿಗ್ಗೆ 10 ಗಂಟೆಗೆ ಜಜಿರಾಕಲ್ಲು ಟೋಲ್‌ ಪ್ಲಾಜಾದ ಮೂಲಕ ರಾಹುಲ್‌ ಗಾಂಧಿ ಅವರು ಆಂಧ್ರ ಪ್ರದೇಶವನ್ನು ಪ್ರವೇಶಿಸಲಿ ದ್ದಾರೆ. ಒಬಲಾಪುರಂನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಸಂಜೆ ಯಾತ್ರೆಯನ್ನು ಪುನಃ ಆರಂಭಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್‌ 30ರಂದು ಕರ್ನಾಟಕ ಪ್ರವೇಶಿಸಿರುವ ಯಾತ್ರೆಯು ಅಕ್ಟೋಬರ್‌ 20ರಂದು ನಿರ್ಗಮಿಸಲಿದೆ. ಈ ಮಧ್ಯೆ ರಾಜ್ಯದಲ್ಲಿ 21 ದಿನಗಳಲ್ಲಿ 511 ಕಿ.ಮೀ.ಯನ್ನು ಯಾತ್ರೆ ಕ್ರಮಿಸಲಿದೆ.