Wednesday, 11th December 2024

ಎಚ್‌.ಕೆ.ಪಾಟೀಲ ವಿರುದ್ಧ ಅನಿಲ್ ಮೆಣಸಿನಕಾಯಿ ವಾಗ್ದಾಳಿ

ಭ್ರಷ್ಟಾಚಾರದ ಮುಖವಾಡ ಕಳಚಿ ಬಿದ್ದಿದೆ
-ಮಂತ್ರಿಯಾಗಿದ್ದಾಗ ಏನೇನು ಮಾಡಿದ್ದಿರಾ?
-ಚುನಾವಣೆಯ ಭಯದಿಂದ ಇಲ್ಲಸಲ್ಲದ ಆರೋಪ
ಗದಗ: ಶಾಸಕ ಎಚ್. ಕೆ. ಪಾಟೀಲ ಅವರ ಭ್ರಷ್ಟಾಚಾರದ, ಅವ್ಯವಹಾರದ ಮುಖವಾಡ ಕಳಚಿ ಬಿದ್ದಿದೆ. ಚುನಾವಣೆ ಹತ್ತಿರ ಇರುವುದರಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಾ, ಜನರಿಗೆ ಹತ್ತಿರವಾಗುವ ನಾಟಕ ಆರಂಭಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಕೆಂಡಾಮಂಡಲರಾದರು.
ನಗರದ ಖಾಸಗಿ ಹೊಟೇಲದ‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಷ್ಟು ದಿನ ಇಲ್ಲದ ಗದಗ ಜನರ ಮೇಲಿನ ಪ್ರೀತಿ, ಕಾಳಜಿ ಈಗ ದೀಢೀರನೇ ಬರುವುದಕ್ಕೆ ಚುನಾವಣೆ ಸಮೀಪಿಸಿರುವುದು ಎಂಬುದು ಎಂಥವರಿಗಾದರೂ ಗೊತ್ತಾಗು ತ್ತದೆ. ಶಾಸಕರು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್.ಕೆ.ಪಾಟೀಲರು ಕುಂಭಕರ್ಣ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಿದ್ದಾರೆ. ಜೊತೆಗೆ ವರ್ಷಾನುಗಟ್ಟಲೇ ಗದಗ ಜನರಿಗೆ ಕುಡಿಯುವ ನೀರು ಸಿಕ್ಕಿಲ್ಲ ಎಂಬುದನ್ನು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ತಪ್ಪಿನ ಹೊಣೆಯನ್ನು ನಗರಸಭೆಯ ಬಿಜೆಪಿ ಸದಸ್ಯರ ಹೆಗಲಿಗೆ ಹಾಕುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದರು.
ಚುನಾವಣೆಯ ಸಂದರ್ಭದಲ್ಲಿ ಗದಗ ಬೆಟಗೇರಿ ಮಹಾಜನತೆಗೆ 24/7 ಕಾಲ ನೀರು ಕೊಡ್ತಿವಿ ಎಂದು ಸಿದ್ದರಾಮಯ್ಯನವರನ್ನು ಕರೆಸಿ, ಅವರಿಂದಲೇ ಹೇಳಿಸಿ, ಕಳ್ಳ ವೋಟು, ಸತ್ತವರ ವೋಟು, ನಕಲಿ ವೋಟು ಹಾಕಿಸಿಕೊಂಡು ಹಾಗೂ ಹೀಗೂ ಗೆದ್ದು 4 ವರ್ಷಗಳಾದವು. ಪಾಟೀಲರು ನೀಡಿದ್ದ ಭರವಸೆ ಏನಾಯ್ತು? ಎಂದು ಪ್ರಶ್ನಿಸಿದರು.
ಮತ ಹಾಕಿದ ಮತದಾರನಿಗೆ ಕೃತಜ್ಞತೆಯ ಕೆಲಸ ಮಾಡಬೇಕಿದ್ದ ಎಚ್‌ಕೆ, ಕೇಂದ್ರ ಸರಕಾರದ 60 ಕೋಟಿ ರೂಪಾಯಿ ಅನುದಾನದಡಿಯ ಹುಲ ಕೋಟಿ ಕೃಷಿ ವಿಜ್ಞಾನ ಕೇಂದ್ರವನ್ನು ಅತಿಥಿ ಗೃಹ ಮಾಡಿಕೊಂಡು ನಿದ್ರೆಗೆ ಜಾರಿದ್ದಾರೆ. ಗದಗನಲ್ಲೇ ಏನು ಜನಪರ ಕೆಲಸ ಮಾಡದ ಅವರು ರಾಷ್ಟ್ರೀಯ ನಾಯಕರಾಗಿ ರಾಜ್ಯ ಬಿಟ್ಟು ಬೇರೆಡೆ ಏನು ಕೆಲಸ ಮಾಡಿದ್ದಾರೆ ಎಂಬು ದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ಹರಿಹಾಯ್ದರು.
ಎಚ್.ಕೆ.ಪಾಟೀಲರು ಆರ್‌ಡಿಪಿಆರ್ ಮಂತ್ರಿಯಾಗಿದ್ದಾಗ ಜಿಲ್ಲೆಯ ಯಾವ ಗ್ರಾಮೀಣ ರಸ್ತೆಗಳನ್ನು ಸುಧಾರಣೆ ಮಾಡಿದ್ದಾರೆ? ಹುಲಕೋಟಿ ಬಿಟ್ಟು ಗದಗ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮೀಣ ರಸ್ತೆಗಳು ತೀವ್ರ ಹದಗೆಟ್ಟಿವೆ. ಅವರ ಮನೆಯ 20 ಜನ ಗುತ್ತಿಗೆದಾರರ ಕೈಗೆ ಯುಜಿಡಿ ಕೆಲಸ ಕೊಟ್ಟು ಕೋಟಿಗಟ್ಟಲೆ ಹಣ ಲೂಟಿ ಹೊಡೆದಿದ್ದಾರೆ. ಎಲ್ಲ ಕಡೆ ಕಳಪೆ ಕಾಮಗಾರಿ. ಜನಪ್ರತಿನಿಧಿಗೆ ಮುಂದಿನ ಹತ್ತಿಪ್ಪತ್ತು ವರ್ಷಗಳ ದೂರದೃಷ್ಟಿತ್ವ ಇರಬೇಕು. ಎಚ್.ಕೆ.ಪಾಟೀಲರಿಗೆ ಯಾವ ದೂರದೃಷ್ಟಿಯೂ ಇಲ್ಲ, ಅಭಿವೃದ್ಧಿ ಮಾಡುವ ದೃಷ್ಟಿಕೋನವೂ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಗದಗ ನಗರದ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣವೇ ಎಚ್‌.ಕೆ.ಪಾಟೀಲ. ಸಾಕಷ್ಟು ಉದ್ಯೋಗಾವಕಾಶ ಸಿಗುತ್ತಿದ್ದ ಕೈಗಾರಿಕೆಯನ್ನು ಓಡಿಸಿದ ಮಹಾನ್ ಕೀರ್ತಿ ಪಾಟೀಲರಿಗೆ ಸಲ್ಲುತ್ತದೆ. ಈಗಲೂ ಕಾಲ ಮಿಂಚಿಲ್ಲ. ಜನರ ಬಳಿ ಕ್ಷಮೆಯಾಚಿಸಿ, ಉಳಿದಿರುವ ಶಾಸಕತ್ವದ ಅವಧಿಯನ್ನು ಜನಪರ ಕೆಲಸ ಮಾಡಿ ಸಾರ್ಥಕಗೊಳಿಸಲು ಪ್ರಯತ್ನಿಸಿದರೆ ಸಹಕಾರ ಕೊಡುತ್ತೇವೆ ಎಂದು ಸಲಹೆ ನೀಡಿದರು.
ಈ ವೇಳೆ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರು, ಜಗನ್ನಾಥ ಸಾ ಬಾಂಢಗೆ, ರಾಘು ಯಳವತ್ತಿ, ವಿದ್ಯಾವತಿ ಗಡಗಿ, ಅಶ್ವಿನಿ ಜಗತಾಪ, ಸಿದ್ದಪ್ಪ ಪಲ್ಲೇದ, ರತ್ನ ಕುರಗೋಡ, ಉಷಾ ದಾಸರ್, ಚಂದ್ರು ತಡಸದ ಮತ್ತಿತರರು ಇದ್ದರು.
ವಿಜಯೇಂದ್ರ ಬಂದರೆ ಸಂತೋಷ: ಲಿಂಗಾಯತ ಸಮುದಾಯದ ವರ್ಚಸ್ಸು, ವಿಶ್ವಾಸ ಉಳಿಸಲು, ಗಳಿಸಲು ವಿಜಯೇಂದ್ರ ಇಲ್ಲಿ ಸ್ಪರ್ಧಿಸುವುದಾದರೆ ಸಂತೋಷ. ಪಕ್ಷ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುತ್ತೇನೆ ಎಂದು ಅನಿಲ್ ಮೆಣಸಿನಕಾಯಿ ಹೇಳಿದರು.
***
“ಶಾಸಕ ಎಚ್.ಕೆ. ಪಾಟೀಲರು ನೀರಿನ ವಿಷಯ ಮುಂದಿಟ್ಟುಕೊಂಡು ಚುನಾವಣೆ ದೃಷ್ಟಿಯಿಂದ ಹಾಗೂ ಬಿಜೆಪಿಗೆ ಸಿಗುತ್ತಿರುವ ವ್ಯಾಪಕ ಬೆಂಬಲದಿಂದ ಭೀತಿಗೊಂಡು ಜನರನ್ನು ಮರುಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಜನ ಈಗ ಮರುಳಾಗುವು ದಿಲ್ಲ. ನಿಮ್ಮ ಅವಧಿಯಲ್ಲಿ ಯುಜಿಡಿ ಕೆಲಸ, ಕುಡಿಯುವ ನೀರಿನ ಕೆಲಸ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಇದನ್ನು ಸವಾಲಾಗಿ ಸ್ವೀಕರಿಸಿ ಉತ್ತರಿಸಲಿ. ನನ್ನ ಬಳಿ ದಾಖಲೆಗಳಿವೆ.
-ಅನಿಲ್ ಮೆಣಸಿನಕಾಯಿ, ಬಿಜೆಪಿ ಮುಖಂಡ, ಗದಗ.