ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಶಾಸಕ ಬಿ. ವೈ. ವಿಜಯೇಂದ್ರ ಮತ್ತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಬುಧವಾರ ಡ್ಯಾಂಗೆ ಬಾಗಿನ ಅರ್ಪಿಸಿದರು.
ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿಕಾರಿಪುರದ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದೆ.
ಈ ಡ್ಯಾಂ ಶಿಕಾರಿಪುರಕ್ಕೆ ಕುಡಿಯುವ ನೀರು ಪೂರೈಸುವ ಜಲಾಶಯವಾಗಿದೆ. ಸಾಮಾನ್ಯವಾಗಿ ಜುಲೈ ಕೊನೆಯ ವಾರ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಅವಧಿಗೂ ಮೊದಲೇ ತುಂಬಿದೆ.
ಬುಧವಾರ ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ್ರ ಕುಟುಂಬದವರ ಜೊತೆ ಅಂಜನಾಪುರ ಜಲಾಶಯಕ್ಕೆ ಭೇಟಿ ನೀಡಿ, ಬಾಗಿನ ಸಮರ್ಪಣೆ ಮಾಡಿದರು. ಅಂಜನಾಪು ಜಲಾಶಯ ಭರ್ತಿಯಾಗಿ ಕೋಡಿ, ಬಿದ್ದಿದ್ದು ರೈತರು ಸಂತಸಗೊಂಡಿದ್ದಾರೆ.
ಅಂಜನಾಪುರ ಚಿಕ್ಕ ಡ್ಯಾಂ: ಶಿಕಾರಿಪುರದ ಅಂಜನಾಪುರ ಡ್ಯಾಂ 1.82 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಬಹುದಾದ ಚಿಕ್ಕ ಡ್ಯಾಂ ಆಗಿದೆ. ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತದೆ.
ಈ ಡ್ಯಾಂ ಭರ್ತಿಯಾದರೆ 6,732 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. ಆದ್ದರಿಂದ ಡ್ಯಾಂ ಭರ್ತಿಯಾಗಿ, ಕೋಡಿ ಬಿದ್ದಿದ್ದು ರೈತರಲ್ಲಿ ಸಂತಸ ಮೂಡಿದೆ. 1936ರಲ್ಲಿ ಮೈಸೂರು ಮಹಾರಾಜರು ನಿರ್ಮಾಣ ಮಾಡಿದ ಜಲಾಶಯ ಇದಾಗಿದೆ.
21 ಅಡಿ ಎತ್ತರದ ಅಂಜನಾಪುರ ಡ್ಯಾಂ 1600 ಮೀಟರ್ ಮಣ್ಣಿನ ಏರಿ ಹೊಂದಿದೆ. ಡ್ಯಾಂ ಭರ್ತಿಯಾದ ಮಾಹಿತಿ ತಿಳಿದು ನೂರಾರು ಜನರು ನೀರಿನ ವೈಭವ ನೋಡಲು ಆಗಮಿಸುತ್ತಿದ್ದಾರೆ. ಜಿಲ್ಲೆಯ ಹೊಸನಗರ ಭಾಗದಲ್ಲಿ ಹೆಚ್ಚು ಮಳೆಯಾದರೆ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತದೆ.
ತುಂಗಾ ನದಿ ನೀರು ಹೊಸಳ್ಳಿ ಏತ ನೀರಾವರಿ ಯೋಜನೆ ಮೂಲಕ ಕುಮದ್ವತಿ ನದಿ ಸೇರಿ ಅಂಜನಾಪುರ ಡ್ಯಾಂ ತಲುಪುತ್ತದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತುಂಗಾ ನದಿ ನೀರನ್ನು ಅಂಜನಾಪುರಕ್ಕೆ ತರುವ ಯೋಜನೆಯನ್ನು ಸುಮಾರು 199 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಿದ್ದರು.
ಶಿವಮೊಗ್ಗ ಸಮೀಪದ ಹೊಸಳ್ಳಿ ಮತ್ತು ಹರಕೆರೆ ಗ್ರಾಮದ ಸಮೀಪದಲ್ಲಿ ತುಂಗಾ ನದಿಗೆ ಜಾಕ್‌ವೆಲ್ ಅಳವಡಿಕೆ ಮಾಡಲಾಗಿದೆ. ಇದರ ಮೂಲಕ 0.75 ಟಿಎಂಸಿ ಅಡಿ ನೀರನ್ನು ಲಿಫ್ಟ್ ಮಾಡಿ, ಪೈಪ್‌ಗಳ ಮೂಲಕ ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು, ಹಾರನಹಳ್ಳಿ ಮುಂತಾದ ಗ್ರಾಮಗಳ ಕೆರೆ ತುಂಬಿಸಲಾಗುತ್ತದೆ. 0.40 ಟಿಎಂಸಿ ಅಡಿ ನೀರು ಅಂಜನಾಪುರ ಜಲಾಶಯ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಅಂಜನಾಪುರ ಡ್ಯಾಂ ಪಕ್ಕದಲ್ಲಿಯೇ ಸುಮಾರು 6.5 ಎಕರೆ ಪ್ರದೇಶದಲ್ಲಿ 6 ಕೋಟಿ ರೂ. ಖರ್ಚು ಮಾಡಿ ಸುಂದರ ಉದ್ಯಾನ ನಿರ್ಮಾಣ ಮಾಡಲಾಗಿದೆ. ಆಗ ಶಿಕಾರಿಪುರದ ಶಾಸಕರಾಗಿದ್ದ ಬಿ. ಎಸ್. ಯಡಿಯೂರಪ್ಪ ಉದ್ಯಾನ ಉದ್ಘಾಟನೆ ಮಾಡಿದ್ದರು. ಶಿಕಾರಿಪುರ ಪಟ್ಟಣದಿಂದ ಸುಮಾರು 16 ಕಿ. ಮೀ. ದೂರದಲ್ಲಿ ಜಲಾಶಯ ಮತ್ತು ಉದ್ಯಾನವಿದೆ.