Thursday, 12th December 2024

Angioplasty: ಹೃದಯಾಘಾತಕ್ಕೆ ಒಳಗಾಗಿದ್ದ 20 ವರ್ಷ ಯುವಕನಿಗೆ ಯಶಸ್ವಿ ಸ್ಟಂಟ್‌ ಅಳವಡಿಕೆ

ಬೆಂಗಳೂರು: ಕೇವಲ 20 ವರ್ಷ ವಯಸ್ಸಿನ ಯುವಕ ಹೃದಯಾಘಾತಕ್ಕೆ ಒಳಗಾಗಿದ್ದು, ಆತನಿಗೆ ಆಂಜಿಯೋ ಪ್ಲ್ಯಾಸ್ಟಿ ಮಾಡುವ ಮೂಲಕ ಹೃದಯದಲ್ಲಿ ಸ್ಟಂಟ್‌ ಅಳವಡಿಸಲಾಗಿದೆ. ಇದು ಹೃದಯಾಘಾತ ಮಕ್ಕಳು, ಯುವಜನರಲ್ಲೂ ಕಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಕನ್ಸಲ್ಟೆಂಟ್ ಡಾ. ಪವನ್ ರಾಸಲ್ಕರ್ ಅವರ ತಂಡವು ಯುವಕನಿಗೆ ಮರುಜೀವ ನೀಡಿದೆ. ಈ ಕುರಿತು ಮಾತನಾಡಿದ ಡಾ. ಪವನ್ ರಾಸಲ್ಕರ್, ಕೇವಲ 20 ವರ್ಷದ ಪಂಕಜ್‌ (ಹೆಸರು ಬದಲಿಸಲಾಗಿದೆ.)ಗೆ ಎದೆ ನೋವು ಕಾಣಿಸಿಕೊಂಡಿದೆ, ಪ್ರಾರಂಭದಲ್ಲಿ ಇದು ಗ್ಯಾಸ್ಟ್ರಿಕ್‌ ಎಂದು ನಿರ್ಲಕ್ಷಿಸಲಾಗಿದೆ. ಆದರೆ, ಆ ನೋವು ಎಡಗೈವರೆಗೂ ಹರಡಿದ ಪರಿಣಾಮ ಹಾಗೂ ಹೃದಯದ ನೋವು ತೀವ್ರಕೊಂಡ ಕಾರಣ, ಆಸ್ಪತ್ರೆಗೆ ಕರೆತರಲಾಗಿದೆ.

ವಯಸ್ಸು ತೀರ ಕಡಿಮೆ ಇರುವ ಕಾರಣ ಹೃದಯಾಘಾತವಾಗಿರುವ ಸಾಧ್ಯತೆ ಬಗ್ಗೆ ಅನುಮಾನವಿತ್ತು. ಆದರೆ, ಯುವಕನ ಲಕ್ಷಣ ಗಮನಿಸಿದಾಗ ಪರೀಕ್ಷೆಗೆ ಒಳಪಡಿಸಿದೆವು. ಹೃದಯಾಘಾತವೆಂದು ತಿಳಿದ ಬಳಿಕ ಆತನಿಗೆ ಕೂಡಲೇ ಚಿಕಿತ್ಸೆ ಪ್ರಾರಂಭಿಸಿದೆವು. ಆಂಜಿಯೋಪ್ಲ್ಯಾಸ್ಟಿ ಎಂದು ಕರೆಯಲ್ಪಡುವ ಕನಿಷ್ಠ ಆಕ್ರಮಣಕಾರಿ ಕಾರ್ಯವಿಧಾನವನ್ನು ನಡೆಸಿದೆವು. ನಮ್ಮ ತಂಡ ಅವನ ಮಣಿಕಟ್ಟಿನ ಮೂಲಕ ಅವನ ಹೃದಯ ಪ್ರವೇಶಿಸಿತು. ಹೀಗೆ ಮಾಡುವುದರಿಂದ ಹೃದಯದಲ್ಲಾಗುವ ಅಸ್ವಸ್ಥತೆಯನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಶಸ್ತ್ರಕಿತ್ಸೆಯ ಭಾಗವಾಗಿ ಹೃದಯದ ಅಪಧಮನಿಯನ್ನು ಯಶಸ್ವಿಯಾಗಿ ತೆರೆದು, ರಕ್ತದ ಹರಿವನ್ನು ಸಾಮಾನ್ಯಗೊಳಿಸಲು ಸ್ಟೆಂಟ್ ಅಳವಡಿಸಲಾಗಿದೆ ಎಂದು ವಿವರಿಸಿದರು.

ಇಂದಿನ ಆರೋಗ್ಯ ಕ್ರಮ ಹಾಗೂ ಬದಲಾದ ಜೀವನ ಶೈಲಿಯಿಂದ ಯುವಕರು ಸಹ ಹೃದಯಾಘಾತಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಯುವಕರು ಸಹ ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತಿ ಮುಖ್ಯ ಎಂದು ಸಲಹೆ ನೀಡಿದರು.