ಅಕ್ಷರ ದಾಸೋಹ ಯೋಜನೆ ವಿಭಾಗದಿಂದ ಸ್ಪಷ್ಟನೆ
ವಿಜಯಪುರ : ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆ ಸ್ಥಗಿತ ಗೊಂಡಿರುವುದಿಲ್ಲ ಎಂದು ಜಿಲ್ಲಾ ಪಂಚಾಯತ್ನ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆ ವಿಭಾಗದ ಕಚೇರಿ ಪ್ರಕಟಣೆ ತಿಳಿಸಿದೆ.
ವಿಜಯಪುರ ಗ್ರಾಮೀಣ ವಲಯ ಭಾಗದಲ್ಲಿ ಬರುವ ತಿಕೋಟ, ಬಬಲೇಶ್ವರ ಸೇರಿದಂತೆ ನಗರ ವಲಯದ ಸರಕಾರಿ ಶಾಲೆಗಳಲ್ಲಿ ಬಿಸಿ ಊಟ ಬಂದ್ ಆಗಿರುವ ಕುರಿತು ವಿಶ್ವವಾಣಿ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಗ್ಯಾಸ್ ಏಜನ್ಸಿಯವರಿಗೆ 20 ಲಕ್ಷ ರೂಪಾಯಿಗಳು ಪಾವತಿಸುವ ಬಾಕಿ ಬಿಲ್ಲು ಇರುವುದೆಂದು ಕೂಡ ವರದಿಯಾಗಿದೆ.
2021-22ನೇ ಆರ್ಥಿಕ ವರ್ಷದಲ್ಲಿ 31-ಮಾರ್ಚ 2022ರ ವರೆಗಿನ ಗ್ಯಾಸ್ ಏಜನ್ಸಿಯವರು ಸಲ್ಲಿಸಿದ ಎಲ್ಲ ಬಿಲ್ಲುಗಳನ್ನು ಪಾವತಿಸಲಾಗಿದೆ. 13-06-2022ರಂದು ಸರ್ಕಾರದ ಆದೇಶದಂತೆ 2022-23ನೇ ಸಾಲಿನ ಆರ್ಥಿಕ ವರ್ಷದ ಮುಂಗಡ ಹಣವನ್ನು ಜಿಲ್ಲಾ ಪಂಚಾಯತಿಯಿಂದ ಜಿಲ್ಲೆಯ ಎಲ್ಲ ಜಿಲ್ಲಾ ಮತ್ತು ತಾಲೂಕ ಪಂಚಾಯತಿಯ ಡಿಡಿಓ ಗಳಿಗೆ ಬಿಡುಗಡೆ ಮಾಡಲಾಗಿದೆ.
ಆದುದರಿಂದ ಗ್ಯಾಸ್ ಏಜನ್ಸಿಯವರಿಗೆ ಏಪ್ರೀಲ್-2022 ರಿಂದ ಇಲ್ಲಿಯವರೆಗಿನ ಬಾಕಿ ಇರುವ ಬಿಲ್ಲುಗಳನ್ನು ಪಾವತಿಸಲು ಸೂಚಿಸಲಾಗಿದೆ. ಹಾಗೂ ಗ್ಯಾಸ್ ಏಜನ್ಸಿಯವರು ಸಹ ಯಾವುದೇ ಅಡೆ-ತಡೆಗಳಿಲ್ಲದಂತೆ ಗ್ಯಾಸ್ಗಳನ್ನು ಎಲ್ಲ ಶಾಲೆಗಳಿಗೆ ಸರಬರಾಜು ಮಾಡವುದಾಗಿ ಭರವಸೆ ನೀಡಿರುತ್ತಾರೆ. ಮತ್ತು ಗ್ಯಾಸ್ ಏಜನ್ಸಿಯವರು ಗ್ಯಾಸಗಳನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದ್ದು, ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟ ಯೋಜನೆ ಸ್ಥಗಿತಗೊಂಡಿರುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಅಕ್ಷರ ದಾಸೋಹ ಯೋಜನೆ ವಿಭಾಗದ ಪ್ರಕಟಣೆ ತಿಳಿಸಿದೆ.
ಕೋಟ್ : ಈಗಾಗಲೇ ಸಂಬಂಧ ಪಟ್ಟ ಗ್ಯಾಸ್ ಏಜೆನ್ಸಿಯವರಿಗೆ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಬಾಕಿಯಿರುವ ಬಿಲ್ ಗಳನ್ನು ಪಾವತಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಮಧ್ಯಾನ್ಹದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸುವುದಿಲ್ಲ.
ರಾಹುಲ್ ಸಿಂಧೆ, ಜಿಲ್ಲಾ ಪಂಚಾಯತ್ ಸಿಇಒ, ವಿಜಯಪುರ