ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ನಿಮ್ಮಾಕಲಕುಂಟೆ ಗ್ರಾಮದ ಮುನಿಲಕ್ಷ್ಮೀ ಅವರಿಗೆ ಸೇರಿದ್ದ ಸುಮಾರು 1.5 ಲಕ್ಷ ಬೆಲೆ ಬಾಳುವ ಎರಡು ಸೀಮೆ ಹಸುಗಳು ವಿದ್ಯುತ್ ಕಂಬದ ಬಳಿ ಮೇಯಲು ಹೋದ ಸಂದರ್ಭ ದಲ್ಲಿ ವಿದ್ಯುತ್ ಪ್ರವಹಿಸಿ ಮರಣಕ್ಕೀಡಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಗರದ ಜಿಲ್ಲಾ ಕೇಂದ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತರು ಮಾರುಕಟ್ಟೆಗೆ ಬರುವಾಗ ತಂದು ಹಾಕಿದ ಸೊಪ್ಪುಸೊದೆ, ಹಾಳಾದ ತರಕಾರಿ ಉತ್ಪನ್ನಗಳನ್ನು ಮೇಯಲು ಬರುತ್ತಿದ್ದ ಎರಡು ಹಸುಗಳು ಶನಿವಾರವೂ ಬಂದಿವೆ. ಇಲ್ಲೆಲ್ಲಾ ಬಂದು ಮೇದುಕೊಂಡು ಹಾಲು ಕರೆಯುವ ಸಮಯಕ್ಕೆ ಸರಿಯಾಗಿ ಮಾಲಿಕರ ಮನೆಯ ಬಳಿ ತೆರಳುತ್ತಿದ್ದವು ಎನ್ನಲಾಗಿದೆ. ಆದರೆ ಶನಿವಾರ ಕಣ್ಣುಕತ್ತಲೆಯಾದರೂ ಮನೆಯ ಬಳಿ ಹಸುಗಳು ಬಾರದ ಕಾರಣ ಮಾಲಿಕರು ಹುಡುಕಿಕೊಂಡು ಬಂದಾಗ ವಿದ್ಯುತ್ ಕಂಬಕ್ಕೆ ಸಿಕ್ಕಿ ಸಾವನ್ನಪ್ಪಿರುವ ಸುದ್ದಿ ತಿಳಿದಿದೆ. ಕೂಡಲೇ ಬೆಸ್ಕಾಂ ಅವರಿಗೆ ಮಾಹಿತಿ ನೀಡಿ ವಿದ್ಯುತ್ ನಿಲ್ಲಿಸಿ ಸತ್ತ ಹಸುಗಳನ್ನು ಪಕ್ಕಕ್ಕೆ ಎಳೆಯಲಾಗಿದೆ.
ಈ ಬಗ್ಗೆ ಮಾತನಾಡಿರುವ ಮುನಿಲಕ್ಷ್ಮೀ ಅವರು ನಮ್ಮ ಸಂಸಾರಕ್ಕೆ ಆಸರೆಯಾಗಿದ್ದ ಹಸುಗಳು ಹೀಗೆ ಬಲಿಯಾಗಿ ರುವ ಕಾರಣ ನಮ್ಮ ಬದುಕು ಬೀದಿಗೆ ಬಿದ್ದಿದೆ. ಪಶುಸಂಗೋಪನೆ ಇಲಾಖೆ, ಎಪಿಎಂಸಿ ಮಾರುಕಟ್ಟೆ ಆಡಳಿತ,ಬೆಸ್ಕಾಂ ಇಲಾಖೆ ನೆರವಿಗೆ ನಿಲ್ಲಬೇಕಿದೆ. ಮಾನವೀಯತೆಯಿಂದಾದರೂ ಹಸುಗಳನ್ನು ಕೊಡಿಸಿಕೊಟ್ಟರೆ ಬದುಕು ಸಾಗಿಸಲು ಅನುಕೂಲವಾಗಲಿದೆ. ಜನಸಂಚಾರ ಇರುವ ಮಾರುಕಟ್ಟೆಯಲ್ಲೇ ಕರೆಂಟಿಗೆ ಸಿಕ್ಕಿ ಹಸುಗಳು ಮೃತವಾಗಿರುವುದು ಆಶ್ಚರ್ಯತಂದಿದೆ. ಇದಕ್ಕೆ ಬೆಸ್ಕಾಂ ಇಲಾಖೆಯೇ ಕಾರಣ ಎಂದು ದೂರಿದ್ದಾರೆ.