Thursday, 12th December 2024

ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪ ಗ್ರಾಮಕ್ಕೆ ಮಾತ್ರ ಗೃಹಸಚಿವರಾಗಿದ್ದಾರೆ: ಬಿ.ಕೆ.ಹರಿಪ್ರಸಾದ್

ಶಿವಮೊಗ್ಗ: ರಾಜ್ಯದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಮಸ್ಯೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ತೀರ್ಥಹಳ್ಳಿಯಲ್ಲಿ ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಕುಪ್ಪಳ್ಳಿ ಇಡೀ ವಿಶ್ವಕ್ಕೆ ಖ್ಯಾತಿ ತಂದ ಊರು, ಕುವೆಂಪುರವರು ವಿಶ್ವ ಮಾನವ ಸಂದೇಶ ನೀಡಿದರು. ಕುವೆಂಪು ಅವರಿಗೆ ಪಠ್ಯಪುಸ್ತಕ ದಲ್ಲಿ ಅವಮಾನ ಮಾಡಿದಾಗ ಇಲ್ಲಿನ ಶಾಸಕ-ಗೃಹ ಸಚಿವ ಬಾಯಿ ಮುಚ್ಚಿಕೊಂಡಿ ದ್ದಾರೆ.

ರಾಷ್ಟ್ರಕವಿ ಕುವೆಂಪು ಅವರೇನು ಕಾಂಗ್ರೆಸ್ ಪಕ್ಷದವರಲ್ಲ. ಕುವೆಂಪು ಅವರಿಗೆ ಅಪಮಾನ ವಾದಾಗ ಆರಗ ಜ್ಞಾನೇಂದ್ರ ಪ್ರತಿಭಟಿಸಬಹುದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ‌ ನೀಡಬೇಕಿತ್ತು. ಇದೀಗ ಬಿಜೆಪಿ ಪಠ್ಯ ಪರಿಷ್ಕರಣೆ ಮೂಲಕ ನಾಗಪುರ ಯೂನಿವರ್ಸಿಟಿ ಅಂಶಗಳನ್ನು ಮಕ್ಕಳ ಮೇಲೆ ಹೇರುತ್ತಿದೆ.

ತೀರ್ಥಹಳ್ಳಿಯವರೇ ಆದ ಗೃಹಸಚಿವ ಆರಗ ಜ್ಞಾನೇಂದ್ರ ರಾಜ್ಯದ ಇತಿಹಾಸದಲ್ಲೇ‌ ಕಳಪೆ ಗೃಹಸಚಿವ. ಗೃಹಸಚಿವರಾದ ನಂತರ ಆರಗ ಜ್ಞಾನೇಂದ್ರ ಅವರ ಕುಖ್ಯಾತಿ ಹೆಚ್ಚುತ್ತಲೇ ಇದೆ. ಆರಗ ಗೃಹ ಸಚಿವರಾದ ಬಳಿಕ ಒಂದೂ ಸರಿಯಾದ ಹೇಳಿಕೆ ನೀಡಿಲ್ಲ.

ಆರಗ ಅವರಿಂದಾಗಿ ಕರ್ನಾಟಕ ಉತ್ತರ ಪ್ರದೇಶದಂತೆ ಆಗಿದೆ. ಇಡೀ ಕರ್ನಾಟಕಕ್ಕೆ ಗೃಹ ಸಚಿವರಾಗಬೇಕಿದ್ದ ಆರಗ ಜ್ಞಾನೇಂದ್ರ ಪಿಎಸ್ ಐ ಹಗರಣದ ಬಳಿಕ ಕೇವಲ ಗುಡ್ಡೆಕೊಪ್ಪ ಗ್ರಾಮಕ್ಕೆ ಮಾತ್ರ ಗೃಹಸಚಿವರಾಗಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಿಎಸ್ ಐ ಹಗರಣದಲ್ಲಿ ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಮೊದಲ ದೂರು ದಾಖಲಾಗಬೇಕಿತ್ತು.

ಆದರೆ ಆರಗ ಜ್ಞಾನೇಂದ್ರ ಇನ್ನು ಸಚಿವ ಸ್ಥಾನದಲ್ಲೇ ಇದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಜಾಯಮಾನವೇ ಬರಿ ಸುಳ್ಳು ಹೇಳುವುದು. ಮೋದಿ ತಮ್ಮ ಡಿಗ್ರಿ ಮಾರ್ಕ್ಸ್ ಕಾರ್ಡ್ ಗಳನ್ನು ಹುಡುಕುತ್ತಿದ್ದಾರೆ. ಅದಕ್ಕೂ ಒಂದು ಕೈ ಮೀರಿ ಶಿಕ್ಷಣ ಸಚಿವ ನಾಗೇಶ್ ಸುಳ್ಳುಗಾರ, ಆರಂಭದಲ್ಲಿ ರೋಹಿತ್ ಚಕ್ರತೀರ್ಥ ಐಐಟಿ ಪ್ರಾಧ್ಯಾಪಕ ಎಂದು ಬಿಜೆಪಿಗರು ಹೇಳಿದ್ದರು.

ಇತಿಹಾಸವನ್ನು ರಸ್ತೆಯಲ್ಲಿ ಹೋಗುವ ಪೋಕರಿಗಳು ಮಾಡುವಂತದ್ದಲ್ಲ. ಇತಿಹಾಸವನ್ನು ತಜ್ಞರು, ವಿದ್ವಾಂಸರು ರಚಿಸಬೇಕು.

ಈಗ ಪಠ್ಯ ಪುಸ್ತಕ ಪರಿಷ್ಕರಣೆ 200 ಕೋಟಿ ಖರ್ಚಾಗಿರಬಹುದು. ಎಳೆಯ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಪಠ್ಯ ಪುಸ್ತಕವನ್ನ ಕೂಡಲೇ ಹಿಂತೆಗೆದುಕೊಳ್ಳಬೇಕು ಮಕ್ಕಳ ಭವಿಷ್ಯದ ಮೇಲೆ ಆಟ ಆಡುವುದು ಬಿಜೆಪಿಗೆ ಸಾಮಾನ್ಯವಾಗಿದೆ.

ಎಸ್.ಎಲ್ ಭೈರಪ್ಪನವರು ಸರಕಾರಿ ಸಾಹಿತಿಗಳು. ಪರ್ವ ಕಾದಂಬರಿಯ ನಾಟಕಕ್ಕೆ ಎರಡು ಕೋಟಿ ಕೊಟ್ಟರು. ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿಲ್ಲ ಅಂತಾ ಅನ್ನುವವರು ಮೂರ್ಖರು. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ

70 ವರ್ಷದಲ್ಲಿ ನಾವು ಏನು ಮಾಡಿಲ್ಲ ಅಂದಾದರೆ, ವಿಶ್ವದ ಐದನೇ ಆರ್ಥಿಕ ಶಕ್ತಿ ಅಂತಾರಲ್ಲ. ನಾವು ಮಾಡಲಿಲ್ಲ ಅಂದ್ರೆ ಅವರು ಆ ರೀತಿ ಹೇಳಲು ಸಾಧ್ಯವಾಗುತ್ತಿತ್ತಾ? ಗೋ ಮಾಂಸ ಮಾರಾಟ ಮಾಡುವವರೇ ಸಂಘ ಪರಿವಾರದವರು. ಮಕ್ಕಳ ಮೇಲೆ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ.

ಈಗಾಗಿಯೇ ಕರಾವಳಿ ಭಾಗದಲ್ಲಿ ಪರ್ಸಂಟೆಜ್ ಕಡಿಮೆಯಾಗುತ್ತಿದೆ. ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಈಡಿ ವಿಚಾರಣೆ ವಿಚಾರಕ್ಕೆ 2017 ರಲ್ಲಿ ಈಡಿ ಕೇಸ್ ಮುಚ್ಚಿ ಹಾಕಿತ್ತು. ನೂಪುರ್ ಶರ್ಮಾ, ನವೀನ್ ಜಿಂದಾಲ್ ಪ್ರಕರಣದ ದಿಕ್ಕು ತಪ್ಪಿಸಲು ಈಡಿ ಮುಂದಿಟ್ಟಿದ್ದಾರೆ.

ಈಡಿ ಐಟಿ ಸಿಬಿಐಗೆ ಕಾಂಗ್ರೆಸ್ ಹೆದರುವುದಿಲ್ಲ. ಕೇಂದ್ರ ಗೃಹ ಸಚಿವರನ್ನು ಸುಪ್ರೀಂ ಕೋರ್ಟ್ ಎರಡು ವರ್ಷ ಗಡಿಪಾರು ಮಾಡಿತ್ತು.ಗುಜರಾತ್ ನಿಂದ ಎರಡು ವರ್ಷ ಗಡಿಪಾರು ಮಾಡಿತ್ತು.

ಬಿಜೆಪಿ‌ ವಿರುದ್ದ ಹರಿಹಾಯ್ದ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್.