ಕೊಳ್ಳೇಗಾಲ: ಚಾಮರಾಜನಗರದ ವಿಧಾನಸಭಾ ಮೀಸಲು ಕ್ಷೇತ್ರವಾದ ಕೊಳ್ಳೇಗಾಲದಿಂದ ಕೊನೆಗೂ ಎ.ಆರ್.ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಪಡೆದಿದ್ದಾರೆ.
ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರಾದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಬಾಲರಾಜ್ ಹಾಗೂ ಎಸ್ ಜಯಣ್ಣ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದರು. ಕೊನೆಗೆ ಎ.ಆರ್.ಕೃಷ್ಣಮೂರ್ತಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎ.ಆರ್.ಕೃಷ್ಣಮೂರ್ತಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರಿಗೆ ಆಪ್ತರಾಗಿದ್ದಾರೆ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಬಣದ ಹಲವಾರು ಮಂದಿಗೆ ಟಿಕೆಟ್ ಸಿಕ್ಕಿದೆ. ಈ ಮೂಲಕ ಸಿದ್ದರಾಮಯ್ಯ ಪ್ರಾಬಲ್ಯ ಮತ್ತಷ್ಟು ಕಾಂಗ್ರೆಸ್ ಪಕ್ಷದೊಳಗೆ ಕೆಲಸ ಮಾಡಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ದಿಂದ ಟಿಕೆಟ್ ಆಕಾಂಕ್ಷಿಗಳ ಪೈಕಿ ಎ.ಆರ್.ಕೃಷ್ಣಮೂರ್ತಿ ಮತ್ತು ಎಸ್.ಜಯಣ್ಣ ಸಿದ್ದರಾಮಯ್ಯ ಅವರಿಗೆ ಆಪ್ತ ರಾಗಿದ್ದರೆ, ಮಾಜಿ ಶಾಸಕ ಬಾಲರಾಜ್ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಎಆರ್ ಕೃಷ್ಣಮೂರ್ತಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಎನ್ ಮಹೇಶ್ ವಿರುದ್ಧ 52,338 ಮತಗಳನ್ನು ಪಡೆದು ಸೋತಿದ್ದರು. ಬಿಎಸ್‌ಪಿ ಯಿಂದ ಸ್ಪರ್ಧಿಸಿದ್ದ ಎನ್.ಮಹೇಶ್ ಅವರು ಶಿಕ್ಷಣ ಸಚಿವರೂ ಆಗಿದ್ದರು.
ಜೆಡಿಎಸ್‌ನಿಂದ ಸ್ಪರ್ಧಿಸಲು ಪುಟ್ಟಸ್ವಾಮಿ ಮತ್ತು ವಾಲೆ ಮಹದೇವು ಅವರು ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಪ್ರಭಾವಿ ರಾಜಕಾರಣಿಯಾದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆಂದು ಬಹಿರಂಗವಾಗಿ ಘೋಷಿಸಿದ್ದರು.
ಕಾಂಗ್ರೆಸ್‌ನಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳ ಜೊತೆ ನಂಜುಂಡಸ್ವಾಮಿ ಕೂಡ ಮಾಜಿ ಶಾಸಕರಾಗಿದ್ದಾರೆ.