Saturday, 12th October 2024

ಪತ್ನಿಯ ಗೆಳೆಯನ ಕೊಲೆ, ಪತಿ ಸೇರಿ ನಾಲ್ವರ ಬಂಧನ

ಕಲಬುರಗಿ: ಜೇವರ್ಗಿ ಶಾಖಾ ಕಾಲುವೆಯಲ್ಲಿ ಬಳಬಟ್ಟಿ ಗ್ರಾಮದ ಸಮೀಪ ದಲ್ಲಿ ಸೆ.10 ರಂದು ಅಪರಿಚಿತ ವ್ಯಕ್ತಿ ಶವ ಪತ್ತೆ ಯಾಗಿದ್ದ ಪ್ರಕರಣವನ್ನು ಯಡ್ರಾಮಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಸುಪಾರಿ ನೀಡಿದ ಪತಿ ಆತನ ಸಹೋದರ ಸೇರಿದಂತೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದರು.

ಹುಣಸಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸೈಯದ್ ಶಹಾಬುದ್ದೀನ್ ಕೌತಾಳ, ರೆಹಮಾನ್ ಶಹಾಬುದ್ದೀನ್ ಕೌತಾಳ, ಪ್ರಭುಗೌಡ ಭೀಮನಗೌಡ ಬಿರಾದಾರ, ದೇವತ್‍ಕಲ್ ಗ್ರಾಮದ ಮಲ್ಲಿಕಾರ್ಜುನ ಬಸವರಾಜ ಲಖಣಾಪುರ ಬಂಧಿತರು. ಬಂಧಿತರೆಲ್ಲರು ಸೇರಿಕೊಂಡು  ಸುರಪುರದ ಬಿಚಗತಕೇರಿಯ ಚಾಂದಾಪಾಷಾ ಶೇಖ ಮಹ್ಮದ್ ಪಟ್ಟೆಉಸ್ತಾದ ಎಂಬಾತನನ್ನು ಕೊಲೆ ಮಾಡಿದ್ದರು.

ಬಂಧಿತನಾಗಿರುವ ರೆಹಮಾನ ಪತ್ನಿ ರೇಷ್ಮಾಗೆ ಕೊಲೆಯಾಗಿರುವ ಚಾಂದಾಪಾಷಾ ಜತೆಗೆ ಅನೈತಿಕ ಸಂಬಂಧವಿತ್ತು. ಕೆಲ ದಿನ ನಂತರ ಆಕೆ ಆತನೊಂದಿಗೆ ವಾಸಿಸಲು ಶುರುವಿಟ್ಟಿದ್ದಳು. ಇದು ಪತಿ ರೆಹಮಾನ್‍ಗೆ ಘಾಸಿ ಮಾಡಿತ್ತು. ನಿನ್ನ ಪತ್ನಿಯ ಜತೆಗೆ ಸಂಬಂಧವಿಸಿರಿಕೊಂಡು ಆಕೆಯನ್ನು ತನ್ನ ಬಳಿ ಇಟ್ಟುಕೊಂಡಿದ್ದು ಅಲ್ಲದೆ ನಿತ್ಯ ಈತನ ಮನೆ ಕಡೆಗೆ ಬಂದು ನಿಂತು ಕಿಂಡ್‍ಲ್ ಮಾಡುತ್ತಿದ್ದನ್ನು ಸ್ನೇಹಿತರು ಕೇಳುತ್ತಿದ್ದರಿಂದ ಆತನನ್ನು ಮಗಿಸಿಬಿಡಲು ಪ್ಲಾನ್ ಮಾಡಿದರು.

ರೆಹಮಾನ ತನಗೆ ಪರಿಚಿತರಾದ ಇಬ್ಬರಿಗೂ ತಲಾ 60 ಸಾ.ರೂ.ಗೆ ಸುಪಾರಿ ನೀಡಿದ್ದ. ಅಲ್ಲದೆ ನಿಮ್ಮೊಂದಿಗೆ ನನ್ನ ಸಹೋದರ ಸೈಯದ್ ಸಹ ಸಾತ್ ನೀಡುತ್ತಾನೆ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ. ನನ್ನ ಪತ್ನಿಗೆ ಮೋಡಿ ಮಾಡಿ ತನ್ನ ಬಲೆಗೆ ಹಾಕಿಕೊಂಡಿರುವ ಚಾಂದ ಪಾಷಾನನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಸ್ಕೇಚ್ ಮಾಡಿದರು. ಸೆ.9 ರಂದು ಆತನನ್ನು ಕಾರಿನಲ್ಲಿ ಕರೆದುಕೊಂಡು ಕೊಲೆ ಮಾಡಿ ಶವವನ್ನು ಚೀಲದಲ್ಲಿ ಕಟ್ಟಿ ಕೊಲೆಕಲ್ ಹತ್ತಿರ ಕ್ಯಾನಲ್‍ದಲ್ಲಿ ಎಸೆದಿದ್ದರು ಎಂದು ಎಸ್ಪಿ ಇಶಾ ಪಂತ್ ವಿವರಿಸಿದರು.
*
ಮತ್ತೊಂದು ಕೊಲೆ ಕೇಸ್ ಪತ್ತೆಯಾಗುತ್ತಲೇ  ಇನ್ನೊಂದು ಸುಪಾರಿ ಹತ್ಯೆ ಬೆಳಕಿಗೆ ಬಂದಿದೆ.  ಪತ್ನಿಯ ಅನೈತಿಕ ಸಂಬಂಧ ಕಾರಣದಿಂದಾಗಿ ಘಟನೆ ನಡೆದಿದೆ. ಕೊಲೆಗೆ ಸುಪಾರಿ ನೀಡಿದ್ದ ಪತಿ ಸಹ ಅಂದರ್ ಆಗಿದ್ದಾನೆ. ಕೊಲೆಯಾಗಿರುವ ಪಟೆಉಸ್ತಾದ ಪ್ರಾರ್ಥನಾ ಮಂದಿರ ದಲ್ಲಿರುತ್ತಿದ್ದ. ಅಲ್ಲದೆ ಚೀಟಿ ಕಟ್ಟುವು, ಮಂತ್ರಿಸುವುದು ಮಾಡುತ್ತಿದ್ದ ಎಂಬುದು ತನಿಖೆಯ ಕಾಲಕ್ಕೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.