Wednesday, 18th September 2024

ಹುಡುಗಿಯಂತೆ ನಟಿಸಿ 7 ಲಕ್ಷ ಪೀಕಿದ ಕಿರಾತಕನ ಬಂಧನ 

ತುಮಕೂರು: ಫೇಸ್ಬುಕ್ ಮೂಲಕ ಪರಿಚಯವಾಗಿ ಹುಡುಗಿಯಂತೆ ನಟಿಸಿ ಹುಡುಗನೊಬ್ಬನಿಗೆ 7.25 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಯುವಕನನ್ನು ಬಂಧಿಸಲಾಗಿದೆ.
ಜಿಲ್ಲೆಯ ಶಿರಾದ ವಿದ್ಯಾನಗರ ನಿವಾಸಿ ಶಾಂತಕುಮಾರ್ ಎಂಬುವರ ಪುತ್ರ ಭರತ್ ಕುಮಾ‌ರ್ ವಂಚನೆಗೆ ಒಳಗಾದವರು. ಶಿವಮೊಗ್ಗ ಟೌನ್ ನಿವಾಸಿ ಸುಜೇಂದ್ರ ಎಂ.ಬಿ ಬಂಧಿತ ಆರೋಪಿ.
ಭರತ್ ಕುಮಾ‌ರ್’ಗೆ ಫೇಸ್ ಬುಕ್‌’ನಲ್ಲಿ ಪರಿಚಯ ಮಾಡಿಕೊಂಡ ಆರೋಪಿಗಳು ಶರ್ಮಿಳ ಮತ್ತು ದಿವ್ಯ ಎಂಬ ಹೆಸರಿನಲ್ಲಿ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ಚಾಟ್ ಮಾಡಿದ್ದಾರೆ. ಬಳಿಕ ಕಷ್ಟ ಇದೆ ಎಂದು  7.25 ಲಕ್ಷ ರು.ಗಳನ್ನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಹಾಗೂ ಉಳಿತಾಯ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ.
ಈ ಬಗ್ಗೆ ಭರತ್ ಕುಮಾರ್ , ಸಿಇಎನ್ ಪೊಲೀಸ್ ಠಾಣೆಯಲ್ಲಿ 15- 08-2023ರಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿಸೆಂಬರ್ 12ರಂದು , ಶಿವಮೊಗ್ಗ ಟೌನ್ ನಿವಾಸಿ ಸುಜೇಂದ್ರ ಎಂ.ಬಿ(21) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *