Sunday, 15th December 2024

ಕೃತಕ ಬುದ್ಧಿಮತ್ತೆಯಿಂದ ಪವಾಡಗಳನ್ನು ಮಾಡಬಹುದು

tumkur
ತುಮಕೂರು: ಕೃತಕ ಬುದ್ಧಿಮತ್ತೆಯು ಬಹುತೇಕ ಎಲ್ಲ ಕ್ಷೇತ್ರಗಳನ್ನು ಆಕ್ರಮಿಸಿಕೊಂಡಿದೆ. ಪ್ರಸ್ತುತ ತಂತ್ರಜ್ಞಾನವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯಿಂದ ಪವಾಡಗಳನ್ನು ಮಾಡಬಹುದು ಎಂದು ಹಿರಿಯ ಶಿಕ್ಷಣತಜ್ಞ ಶಿವಕುಮಾರ್ ಎಚ್. ಎಂ. ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಅಪ್ಲಿಕೇಶನ್‌ಗಳು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೃತಕ ಬುದ್ಧಿಮತ್ತೆಯು ನೈಜತೆಗೆ ಸವಾಲೊಡ್ಡುತ್ತಿದೆ. ಮಾನವ ನಿರ್ಮಿತ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿ ಉದ್ಯೋಗದಾತರಾಗಬಹುದು ಎಂದರು.
ವಿವಿ ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕಿ ಡಾ. ಕುಸುಮಾ ಕುಮಾರಿ ಬಿ. ಎಂ. ಮಾತನಾಡಿ, ಕೈಗಾರಿಕೋದ್ಯಮಿ ಡಾ. ಎಚ್. ಜಿ. ಚಂದ್ರಶೇಖರ್ ಅವರ ಸಹಯೋಗದಲ್ಲಿ ಶೀಘ್ರದಲ್ಲಿಯೇ ವಿವಿಯಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ ಆರಂಭಿಸಲಾಗುವುದು. ಈಗಾಗಲೇ ಬ್ಯಾಂಕ್, ಆರೋಗ್ಯ, ಮಾಧ್ಯಮ, ಮನರಂಜನೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತನ್ನ ಕಾರ್ಯಕ್ಷಮತೆಯನ್ನು ತೋರಿದೆ ಎಂದು ತಿಳಿಸಿದರು.
ಸಂದರ್ಶಕ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಸ್ವಾಮಿ ಬಿ. ಪಿ., ಉಪನ್ಯಾಸಕರಾದ ರೋಹಿತ್ ಕೆ. ಆರ್., ಶಾಲಿನಿ ಕೆ., ಶಶಿಕಲಾ, ಶೃತಿ ಬಿ., ಭವ್ಯಶ್ರೀ ಟಿ. ಉಪಸ್ಥಿತರಿದ್ದರು.