Saturday, 14th December 2024

ಹನುಮಂತಪ್ಪ ಜಾಲಿಬೆಂಚಿರಿಗೆ ‘ಕನಕರತ್ನ‘ ಪ್ರಶಸ್ತಿ ಪ್ರದಾನ

ನ.೧೧ : ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ – ಅದ್ಧೂರಿ ಆಚರಣೆ

ರಾಯಚೂರು: ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ನ.೧೧ ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಕೆ.ಬಸವಂತಪ್ಪ ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೊರೊನಾ ಎರಡು ವರ್ಷಗಳ ಕಾಲ ಕನಕ ಜಯಂತ್ಯೋತ್ಸವ ಆಚರಣೆ ಅದ್ಧೂರಿಯಾಗಿ ನಿರ್ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಕನಕ ಜಯಂತಿಯನ್ನು ಅತ್ಯಂತ ಅದ್ಧೂರಿಯಿಂದ ಆಚರಿಸಲು ಮತ್ತು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ವ್ಯಾಪಕ ಪ್ರಚಾರ ಮಾಡಲಾಗಿದೆಂದು ಹೇಳಿದರು.

ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷರಾದ ಮಹಾದೇವಪ್ಪ ಮಿರ್ಜಾಪೂರು ಅವರು ಮಾತನಾಡಿ, ಕನಕ ಜಯಂತಿ ಅಂಗವಾಗಿ ಕನಕದಾಸರ ಪುತ್ಥಳಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕುರುಬರ ಸಂಘದ ವತಿಯಿಂದ ಜಯಂತ್ಯೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಿ, ಅಲ್ಲಿಂದ ಡೊಳ್ಳು, ವಿವಿಧ ಕಲಾತಂಡಗಳು ಹಾಗೂ ಪೂರ್ಣಕುಂಭಗಳ ಭವ್ಯ ಮೆರವಣಿಗೆ ನಡೆಸ ಲಾಗುತ್ತದೆ.

ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ ಮೂಲಕ ರಂಗಮಂದಿರಕ್ಕೆ ಆಗಮಿಸಲಾಗುತ್ತದೆ. ಮಾನ್ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿವರಾಜ ಕೊಪ್ಪರ ಅವರು ವಿಶೇಶ ಉಪನ್ಯಾಸ ನೀಡಲಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತಲಾ ೫ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತದೆಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷರಾದ ನಗರಸಭೆ ಮಾಜಿ ಸದಸ್ಯ ಈಶಪ್ಪ ಅವರು ಮಾತನಾಡುತ್ತಾ, ಕನಕ ಜಯಂತ್ಯೋತ್ಸವ ಅಂಗವಾಗಿ ಪ್ರತಿ ವರ್ಷ ನೀಡುವ ಕನಕರತ್ನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಕನಕರತ್ನ ಪ್ರಶಸ್ತಿಯನ್ನು ಹನುಮಂತಪ್ಪ ಜಾಲಿಬೆಂಚಿ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಹನುಮಂತಪ್ಪ ಜಾಲಿಬೆಂಚಿ ಅವರು ಕುರುಬ ಸಮಾಜಕ್ಕೆ ಮತ್ತು ಕಲಾಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸದಾನಂದ ಪೂಜಾರ, ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕರಿಯಪ್ಪ, ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಶಶಿಕಲಾ, ಸಾಹಿತ್ಯ ಕ್ಷೇತ್ರದ ಸೇವೆ ಗುರುತಿಸಿ ಚಿದಾನಂದ ಸಾಲಿ, ಶಿಕ್ಷಣ ಕ್ಷೇತ್ರದಲ್ಲಿ ಜೀವನ್ ಸಾ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಗಾಯಿತ್ರಿ, ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸತ್ಯನಾರಾಯಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆಂದು ಹೇಳಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ವಕೀಲ ಮತ್ತು ನಾಗರಾಜ ಅವರು ಉಪಸ್ಥಿತರಿದ್ದರು.