Friday, 13th December 2024

ಅಧಿಕಾರಿಗಳಿಗೆ ಕಾರ್ಯಕ್ಷೇತ್ರದ ಬಗ್ಗೆ ಹೆಚ್ಚಿನ ಅರಿವು ಅಗತ್ಯ: ಜಿಲ್ಲಾಧಿಕಾರಿ

ತುಮಕೂರು : ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕಚೇರಿ ಆಡಳಿತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಹೊಂದಿರ ಬೇಕು. ಜ್ಞಾನದ ಕೊರತೆ ನೀಗಿದಾಗ ಮಾತ್ರ ಕೆಲಸದ ಒತ್ತಡ ನಿವಾರಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ,ಮಹಾನಗರ ಪಾಲಿಕೆ, ಹಾಗೂ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಷಯಗಳ ಕುರಿತು ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಯಾದ ಎಲ್ಲರೂ ಬುದ್ದಿವಂತರಾಗಿದ್ದು ಸರಕಾರದ ಸುತ್ತೋಲೆಗಳನ್ನು ಓದಿ ಜಾಣ್ಮೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕೆಲಸವನ್ನು ಖುಷಿಯಿಂದ ಮಾಡಬೇಕು.ಒತ್ತಡವನ್ನು ನಿರ್ವಹಿಸುವ ಬುದ್ದಿವಂತಿಕೆ ಅತ್ಯಗತ್ಯ ಎಂದ ಅವರು ತಾವು ಯಾವ ಹುದ್ದೆಯನ್ನು ಅಲಂಕರಿಸುತ್ತಿರೋ ಅದರ ಕುರಿತು ಸಂಪೂರ್ಣ ಜ್ಞಾನ/ ಅರಿವು ಇರಬೇಕು ಎಂದು ತಿಳಿಸಿದರು.

ವೃತ್ತಿ ಜೀವನದಂತೆ ವಯಕ್ತಿಕ ಜೀವನವೂ ಮುಖ್ಯವಾಗಿದ್ದು ಕಚೇರಿ ವಿಷಯವನ್ನು ಮನೆಗೂ, ಮನೆಯ ವಿಷಯಗಳನ್ನು ಕಚೇರಿಗೂ ತರುವುದರಿಂದ ಸಹಜವಾಗಿ ಒತ್ತಡವುಂಟಾಗುತ್ತದೆ.ಜ್ಞಾನದ ಕೊರತೆ ನೀಗಿಸದ ಹೊರತು ಒತ್ತಡದಿಂದ ಹೊರಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆಡಳಿತದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ತರಬೇತಿ ಮತ್ತು ಸಂವಾದಗಳು ಪರಿಣಾಮಕಾರಿ ಪಾತ್ರವಹಿಸುತ್ತವೆ ಎಂದರಲ್ಲದೇ ಜ್ಞಾನದ ಕೀಲಿ ಕೈ ತೆರೆಯಬೇಕಾದರೆ ತರಬೇತಿ ಅತ್ಯವಶ್ಯ ಎಂದು ತಿಳಿಸಿದರು.

ಶಿಬಿರದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್ ಆಂಜನಪ್ಪ, ಪೌರಾಡಳಿತ ನಿರ್ದೇಶನಾಲ ಯದ ವ್ಯವಸ್ಥಾಪಕ ಮಹ್ಮದ್ ಸೈಪುದ್ದಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಿಪಟೂರು ನಗರಸಭೆಯ ಪೌರಾಯುಕ್ತ ಉಮಾಕಾಂತ್, ಶಿರಾ ನಗರಸಭೆಯ ಪೌರಾಯುಕ್ತರಾದ ಶ್ರೀನಿವಾಸ್,ಪುರಸಭೆಯ ಮುಖ್ಯಾಧಿ ಕಾರಿ ಶಿವಪ್ರಸಾದ್, ಮಧುಗಿರಿ ಪುರಸಭೆಯ ಮುಖ್ಯಾಧಿಕಾರಿ ಎ ನಜ್ಮಾ, ಪಾವಗಡ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್, ತುರು ವೇಕೆರೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಮಂಜುಳಾ ದೇವಿ, ಕೊರಟಗೆರೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಭಾಗ್ಯಮ್ಮ, ಗುಬ್ಬಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜಮ್ಮ, ಹುಳಿಯಾರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಭೂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ನೌಕರರು ಶಿಬಿರದಲ್ಲಿ ಭಾಗವಹಿಸಿದ್ದರು.