ಕಲಬುರಗಿ: ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಬಸವನ ಹುಳುಗಳ ಬಾಧೆಯಿಂದ ಬೆಳೆ ಹಾನಿಯಾಗಿದ್ದು, ಕೂಡಲೇ ಸರಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಧಾನಸಭೆಯ ಮಾಜಿ ಸಭಾಧ್ಯಕ್ಷ, ಶಾಸಕ ಬಿ. ಆರ್ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ 10-15 ದಿನದಿಂದ ಸುರಿದ ಬಾರಿ ಮಳೆಯಿಂದಾಗಿ ತಂಪಾದ ವಾತಾವರಣ ಸೃಷ್ಟಿಯಾಗಿ ಕಮಲಾಪುರ, ಆಳಂದ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಬಸವನ ಹುಳುವಿನ ಕಾಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಹುಳುವಿನ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದು ತಾಕಿತು ಮಾಡಿ ದರು.
ಬಸವನ ಹುಳುವಿನ ಕಾಟಕ್ಕೆ ತುತ್ತಾದ ತಾಲೂಕುಗಳಲ್ಲಿ ಸೋಯಾಬಿನ್, ಉದ್ದು ಹಾಗೂ ಹೆಸರು ಬೆಳೆ ಅಧಿಕವಾಗಿ ಬೆಳೆಯ ಲಾಗಿದೆ. ಬೆಳೆಯೂ ಸಹ ಚನ್ನಾಗಿ ಬರುವ ಸಮಯದಲ್ಲಿ ಬಸವನ ಹುಳಗಳ ಕಾಟ ವಿಪರೀತವಾಗಿ ಪರಿಣಮಿಸಿದೆ. ಆಳಂದ, ಕಮಲಾಪುರ ಹಾಗೂ ಚಿಂಚೋಳಿಯಲ್ಲಿ ತಲಾ 6 ಸಾವಿರದಷ್ಟು ಎಕರೆ ಪ್ರದೇಶ ಈಗಾಗಲೇ ಹುಳುವಿನ ಕಾಟಕ್ಕೆ ಹಾಳಾಗಿದೆ ಎಂದ ಅವರು, ಶೀಘ್ರವೇ ಸರಕಾರ ರೈತರ ಗೋಳು ಆಲಿಸುವ ಕೆಲಸ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಬಸವನ ಹುಳುವಿನ ಕಾಟ ಅಧಿಕವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಗಳನ್ನು ಸಂಪರ್ಕಿಸಿದರೆ, ತಂಪು ವಾತಾವರಣದಲ್ಲಿ ಅದೆಲ್ಲಾ ಮಾಮೂಲು, ಬಿಸಿಲಿಗೆ ಹುಳುಗಳು ಸಾಯುತ್ತವೆ. ಇಲ್ಲದಿದ್ದರೆ ಉಪ್ಪುನೀರು ಸಿಂಪಡಿಸಿ ಎಂಬ ಉಡಾಪೆ ಉತ್ತರ ನೀಡುತ್ತಾರೆ. ಹೀಗಾಗಿ ಸರಕಾರ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಸಮೀಕ್ಷೆ ನಡೆಸಬೇಕು. ಕೃಷಿ ವಿಜ್ಞಾನಿಗಳು ಇದಕ್ಕೆ ಪರಿಹಾರವಾಗಿ ಸೂಕ್ತ ಔಷಧಿ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿ ಮಾರ್ಗದರ್ಶನ ಮಾಡಬೇಕು ಎಂದರು.
ಪ್ರಧಾನಿ ಮಂತ್ರಿ ಫಸಲ್ ಭೀಮಾ ಯೋಜನೆಯೂ ಇದೊಂದು ಬೋಗಸ್ ಯೋಜನೆ ಯಾಗಿದೆ. ಕಳೆದ 2 ವರ್ಷದಲ್ಲಿ ಯಾವ ರೈತರಿಗೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತುರ್ತಾಗಿ ಬೆಳೆ ಪರಿಹಾರ ನೀಡಬೇಕು. ಅಲ್ಲದೇ, ವಿಮೆ ಇಲ್ಲದ ಬೆಳೆಗಳಾದ ಸೋಯಾಬಿನ್, ಹೆಸರು ಹಾಗೂ ಉದ್ದಿಗೆ ಪ್ರತಿ ಎಕರೆಗೆ 12 ಸಾವಿರ ರು. ಬೆಳೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷಿ ಸಚಿವರು ಕಲೆಕ್ಷನ್ ಕೌಂಟರ್ ಬಂದ್ ಮಾಡಿ: ಜಿಲ್ಲೆಯಲ್ಲಿ ವಿಪರೀತ ಮೆಳೆಯಿಂದ ಸಾಕಷ್ಟು ಕೃಷಿ ಭೂಮಿ ಹಾಳಾಗಿದೆ. ಅದರಲ್ಲೂ ಆಳಂದ, ಕಮಲಾಪುರ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಬಸವನ ಹುಳುವಿನ ಕಾಟ ಹೆಚ್ಚಾಗಿ ರೈತರು ಕಣ್ಣೀರು ಇಡುತ್ತಿದರು. ಉಸ್ತುವಾರಿ ಸಚಿವರು, ಕೃಷಿ ಸಚಿವರು ಮತ್ತು ಶಾಸಕರು ಇತ್ತಕಡೆ ಸುಳಿಯದೆ ನಿರ್ಲಕ್ಷ ತೋರುತ್ತಿದ್ದಾರೆ. ಉಸ್ತುವಾರಿ ಸಚಿವ ನಿರಾಣಿ ಆಫಜಲಪುರದಲ್ಲಿ ಮಳೆ ಹಾನಿ ಪ್ರದೇಶ ಸಮೀಕ್ಷೆ ಬಿಟ್ಟರೇ ಇನ್ನೇನು ಮಾಡಿಲ್ಲ ಎಂದು ದೂರಿದ ಅವರು, ಕೃಷಿ ಸಚಿವರು ಕಲೆಕ್ಷನ್ ಕೌಂಟರ್ ಬಂದ್ ಮಾಡಿ ಈ ಭಾಗದ ರೈತರ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಿ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ್ ರಾಠೋಡ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಗಣೇಶ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು.