ತುಮಕೂರು: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ತಿಳಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮಾ ಗಾಂಧೀಜಿ ಅವರ ಬದುಕು, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಷ್ಯತೆ ನಿವಾರಣೆ ಮತ್ತು ಸ್ವಾತಂತ್ರ‍್ಯ ಚಳುವಳಿವಳಿಯಲ್ಲಿ ಅವರ ಪಾತ್ರದ ಕುರಿತು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತಿಳಿಸುವ ಸಲುವಾಗಿ ಈ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿಗೆ ಪ್ರತ್ಯೇಕ ವಿಷಯಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು ಎಂದು ತಿಳಿಸಿದ ಅವರು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ‍್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಕುರಿತು ಯಾವುದಾದರೂ ಒಂದು ವಿಷಯದಲ್ಲಿ 5 ರಿಂದ 7ನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಿ ಜಿಲ್ಲಾ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡುವಂತೆ ಸೂಚಿಸಿದರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಗಾಂಧೀಜಿ ಯವರ ತತ್ವಗಳಿಂದ ದೇಶ ಕಟ್ಟುವ ಬಗೆ; ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿಯವರ ಪ್ರಯೋಗಗಳು, ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ, ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು, ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ‍್ಯ ಮತ್ತು ಸಮಾನತೆಯ ಪರಿಕಲ್ಪನೆಗಳು, ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ, ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳು ಕುರಿತು ಯಾವುದಾದರೂ ಒಂದು ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಬೇಕೆಂದು ಸೂಚಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಮಾತನಾಡಿ, ಪ್ರಬಂಧ ಸ್ಪರ್ಧೆ ಕುರಿತು ರೂಪು-ರೇಷೆಗಳ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ 3 ಪ್ರಬಂಧ ರಚನೆಕಾರರಿಗೆ ಅಕ್ಟೋಬರ್ 2ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯ ಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ಆಯ್ಕೆಯಾದವರಿಗೆ ರಾಜ್ಯ ಮಟ್ಟದಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ ಎಂದು ತಿಳಿಸಿದರಲ್ಲದೆ, ಪ್ರೌಢಶಾಲಾ / ಪದವಿ ಪೂರ್ವ / ಕಾಲೇಜು ಹಾಗೂ ಸ್ನಾತಕೋತ್ತರ ಮೂರು ಪ್ರತ್ಯೇಕ ವಿಭಾಗಗಳ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 3,000 ರೂ., ದ್ವಿತೀಯ ಸ್ಥಾನಕ್ಕೆ 2,000 ರೂ., ತೃತೀಯ ಸ್ಥಾನಕ್ಕೆ 1,000 ರೂ. ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ 31,000 ರೂ., ದ್ವಿತೀಯ ಸ್ಥಾನಕ್ಕೆ 21,000 ರೂ. ಹಾಗೂ ತೃತೀಯ ಸ್ಥಾನಕ್ಕೆ 11,000 ರೂ. ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತುಮಕೂರು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮಾಧವ ರೆಡ್ಡಿ, ಮಧುಗಿರಿ ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ನರಸಿಂಹಮೂರ್ತಿ, ತುಮಕೂರು ವಿಶ್ವ ವಿದ್ಯಾನಿಲಯದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ತ್ರಿವೇಣಿ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.