Saturday, 26th October 2024

ಬಾಗೇಪಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ

ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿಗೆ ಅಗತ್ಯ ವಿರುವ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಮೃದ್ಧಿಯಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾ ಕರ್ ಭರವಸೆ ನೀಡಿದರು.

ಬಾಗೇಪಲ್ಲಿ ತಾಲೂಕಿನ ಗಡಿದಿಂ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ, ಒಂದು ಬ್ಯಾಂಕ್ ತೆರೆದಂತೆ. ಮಹಿಳೆಯರು ಆರ್ಥಿಕವಾಗಿ ಸಬಲೀಕಣ ಆಗಬೇಕು ಎಂದು ಎಲ್ಲ ಸಮಾಜ ಸುಧಾರಕರೂ ಹೇಳಿದ್ದಾರೆ ಎಂದರು.

 *ಮಹಿಳೆಯಿಂದ ಸಮಾಜದ ಅಭಿವೃದ್ಧಿ*

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜವನ್ನು ಅಳತೆ ಮಾಡಲು ಮಹಿಳೆಯರ ಅಭಿವೃದ್ಧಿ ಅಳತೆ ಮಾಡದೆ ಅಸಾಧ್ಯ ಎಂದಿದ್ದಾರೆ. ಸ್ವಾಮಿ ವಿವೇಕಾನಂದರು ಪಕ್ಷಿ ಹಾರಲು ಎರಡು ರೆಕ್ಕೆ ಹೇಗೆ ಮುಖ್ಯವೊ, ಸಮಾಜದ ಅಭಿವೃದ್ಧಿಗೆ ಪುರುಷ ಮತ್ತು ಮಹಿಳೆ ಸಮಾನ ಅವಕಾಶ ಪಡೆದು ಮುಂದು ವರಿದರೆ ಮಾತ್ರ ಸಾಧ್ಯ ಎಂದಿದ್ದಾರೆ. ಹಾಗಾಗಿ ದೇಶದ ಅಭಿವೃದ್ಧಿಯಲ್ಲಿ ಮಹಿಳೆ ಯರ ಪಾತ್ರ ಪ್ರಮುಖವಾಗಿದೆ ಎಂದರು.

 *೧೧ ಕೋಟಿ ಶೌಚಾಲಯ*

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಸ್ವಚ್ಛ ಭಾರತ್ ಮಿಷನ್ ಜಾರಿಗೆ ತಂದರು. ಅವರು ಅಧಿಕಾರಕ್ಕೆ ಬಂದ ಎಂಟು ವರ್ಷದಲ್ಲಿ ೧೧ ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಮಹಿಳೆಯರ ಸ್ವಾಭಿಮಾನ ಎತ್ತಿ ಹಿಡಿಯುವ ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲಸವಾಗಿದೆ. ಹಿಂದೆ ಸೌದೆ ಮೂಲಕ ಅಡುಗೆ ಮಾಡಿ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಮಹಿಳೆಯರಿಗೆ ಉಜ್ವಲ ಯೋಜನೆ ಮೂಲಕ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದರು.

 *ಮನೆ ಮನೆಗೆ ಶುದ್ಧ ನೀರು*

ಸ್ವಾತಂತ್ರ‍್ಯ ಬಂದು ೭೫ ವರ್ಷಗಳೇ ಕಳೆದರೂ ಶುದ್ಧ ನೀರಿಗಾಗಿ ಮಹಿಳೆಯರು ಕಿಲೋಮೀಟರ್ ಗಟ್ಟಲೆ ಹೋಗಿ ತರುವ ಪರಿಸ್ಥಿತಿ ಇದೆ. ಸ್ವಾತಂತ್ರ‍್ಯ ದ ಅಮೃತ ಮಹೋತ್ಸವ ಸಂದರ್ಭದಲ್ಲಿ ಇದು ವಿಷಾದದ ಸಂಗತಿ. ಮನೆಗೆ ನಲ್ಲಿ ನೀರು ಎಂಬುದು ಉಳ್ಳವರಿಗೆ ಮಾತ್ರ ಸೀಮಿತ ಎಂಬ ಸ್ಥಿತಿ ಇತ್ತು ಇದು ತೀವ್ರ ನೋವಿನ ಸಂಗತಿಯಾಗಿತ್ತು ಎಂದು ಸಚಿವರು ಹೇಳಿದರು.

ದೇಶದ ಶೇ.೯೦ ರಷ್ಟು  ಕುಟುಂಬಗಳಿಗೆ ನೀರಿನ ಸಂಪರ್ಕವೇ ಇರದ ಪರಿಸ್ಥಿತಿಯಲ್ಲಿ ಪ್ರತಿ ಮನೆಗೆ ನಲ್ಲಿ ನೀರು ನೀಡುವ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದರಿಂದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನಲ್ಲಿ ಮೂಲಕ ನೀಡುವ ಕೆಲಸವಾಗುತ್ತಿದೆ. ಇದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳಿಗೆ ಬಡವರ ಪರ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದರು.

 *ಶಾಶ್ವತ ನೀರಾವರಿ ಅನುಷ್ಠಾನ*

ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಅಗತ್ಯವಿದೆ. ಎಚ್‌ಎನ್ ವ್ಯಾಲಿ ೩ನೇ ಹಂತದ ಯೋಜನೆ ಬಾಗೇಪಲ್ಲಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಜೊತೆಗೆ ಎತ್ತಿನಹೊಳೆ ಯೋಜನೆಗೆ ಅಗತ್ಯವಿರುವ ಅನುದಾನದ ಮೊತ್ತವನ್ನು ೨೩ ಸಾವಿರ ಕೋಟಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಮುಂದಿನ ಎರಡು ವಾರಗಳಲ್ಲಿ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಎತ್ತಿನಹೊಳೆ ಯೋಜನೆಯ ಅನುದಾನವನ್ನು ೨೩ ಸಾವಿರ ಕೋಟಿಗೆ ಹೆಚ್ಚಿಸಿ ಅನುಮೋದನೆ ಪಡೆಯಲಾಗುವುದು. ಚುನಾವಣೆಗೂ ಮುನ್ನವೇ ಶ್ರೀನಿವಾಸಪುರದವರೆಗೂ ಪೈಪ್ ಲೈನ್, ಜಲಾಶಯ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳಿಗೆ ಈ ಅನುದಾನ ಬಳಕೆ ಮಾಡಲಾಗುವುದು. ಎತ್ತಿನಹೊಳೆ ನೀರು ಈ ಭಾಗಕ್ಕೆ ಬಂದ ನಂತರ ಈ ಭಾಗದ ನೀರಿನ ಬವಣೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಸಚಿವರು ತಿಳಿಸಿದರು.

 *೪೧ ಕೋಟಿ ಸಾಲ ವಿತರಣೆ*

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ಆರ್ಥಿಕ ಸಹಾಯ ಮಾಡುತ್ತಿದೆ. ಸುಮಾರು ೨೫ ಕೋಟಿಯನ್ನು  ೫೧೦ ಸ್ತ್ರೀ ಶಕ್ತಿ ಸಂಘಗಳಿಗೆ ವಿತರಿಸಲಾಗುತ್ತಿದೆ. ಸುಮಾರು ೧೬ ಕೋಟಿಯನ್ನು  ೧,೩೨೫ ರೈತರಿಗೆ ಬೆಳೆ ಸಾಲವಾಗಿ ನೀಡಲಾಗುತ್ತಿದೆ. ಎರಡೂ ಸೇರಿ ಒಟ್ಟು ೪೧ ಕೋಟಿ ಸಾಲವನ್ನು ಒಂದೇ ದಿನ ವಿತರಿಸಲಾಗುತ್ತಿದೆ ಎಂದು ಹೇಳಿದರು.

 *ಮನೆ ಬಾಗಿಲಿಗೆ ಸರ್ಕಾರದ ಸೇವೆ*

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮನೆ ಬಾಗಿಲಿಗೇ ಸರ್ಕಾರದ ಸೇವೆಗಳನ್ನು ಕಲ್ಪಿಸಲು ಶ್ರಮಿಸಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ತೀವ್ರ ಶ್ರಮಿಸಲಾಗುತ್ತಿದೆ. ಇನ್ನು ಮುಂದೆ ಒಂದೇ ವಾರದಲ್ಲಿ ಖಾತೆ ಮಾಡಿಸಲು ಕ್ರಮ ವಹಿಸಲಾಗುವುದು ಎಂದರು.
ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರ ಮೇಲ್ದರ್ಜೆಗೆ ಏರಿಸಿ, ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಯಶಸ್ವಿ ಉದ್ದಿಮೆ ದಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡ ಮಹಿಳೆಯರಿದ್ದಾರೆ. ಉದ್ದಿಮೆಗಳನ್ನು ಸ್ಥಾಪಿಸಿ, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಬಡ್ಡಿ ರಹಿತ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿಗೆ ಸಹಕರಿಸುವಂತೆ ಸಚಿವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ನಿರ್ದೇಶಕ ವೆಂಕಟಶಿವಾರೆಡ್ಡಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.