Thursday, 12th December 2024

ಸಮತೋಲನ ಕಾಪಾಡಿಕೊಂಡರೆ ಸಾಧನೆ ಸುಲಭ

ಮಧುಗಿರಿ : ವಿಧ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರೆ ಹೆತ್ತವರ ಹಾಗೂ ಹುಟ್ಟಿದ ಮಣ್ಣಿಗೆ ಕೀರ್ತಿ ತರುವ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ದಲ್ಲಿ ಕ್ರೀಡೆ ಹಾಗೂ ಶಿಕ್ಷಣವು ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಎರಡರಲ್ಲೂ ಸಮತೋಲನ ಕಾಪಾಡಿಕೊಂಡರೆ ಸಾಧನೆ ಸುಲಭವಾಗುತ್ತದೆ. ಕ್ರೀಡೆಯಿಂದ ದೈಹಿಕ ಶಕ್ತಿ ಹಾಗೂ ಏಕಾಗ್ರತೆ ಲಭಿಸಲಿದ್ದು, ಶಿಕ್ಷಣದಿಂದ ಬದುಕು ರೂಪಿಸಿಕೊಳ್ಳಬಹುದು ಎಂದ ಅವರು, ಶಿಕ್ಷಣ ಹಾಗೂ ಕ್ರೀಡೆಗೆ ಬಡತನವು ಎಂದಿಗೂ ಅಡ್ಡಿ ಬರುವುದಿಲ್ಲ ಎಂದರು.

ಮಧುಗಿರಿ ವಿಕಾಸ ವೇದಿಕೆ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಮಾತನಾಡಿ, ದೇಶದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತಿದ್ದು, ವಿಧ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಕ್ರೀಡಾ ಪಟುಗಳಾಗಿ ದೇಶವನ್ನು ಪ್ರತಿನಿಧಿಸಬೇಕು. ಇದರ ಮೂಲಕ ಕ್ರೀಡೆಯಲ್ಲಿ ಸಿಗುವ ಪ್ರತಿಯೊಂದು ಗೆಲುವು ತಾಯಿ ಭಾರತಿಗೆ ಅರ್ಪಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಡಿಡಿಪಿಐ ಗಂಗಾಧರ್, ಪ್ರಾಂಶುಪಾಲ ಅಶ್ವತ್ಥನಾರಾಯಣ, ಉಪನ್ಯಾಸಕರಾದ ಗೋವಿಂದರಾಜು, ನಾ.ಮಹಾಲಿಂಗೇಶ್, ರಂಗಪ್ಪ, ರಾಮಪ್ಪ, ವೈದ್ಯ ಡಾ.ಗೋಪಾಲಕೃಷ್ಣ, ಪುರಸಭೆ ಸದಸ್ಯ ಎಂ.ಆರ್.ಜಗ ನ್ನಾಥ್, ಸಮಾಜ ಸೇವಕ ಮಧು, ಮುಖಂಡರಾದ ತುಂಗೋಟಿ ರಾಮಣ್ಣ, ಬಿಜವರ ಶ್ರೀನಿವಾಸ್ ಹಾಗೂ ಇತರೆ ಕಾಲೇಜುಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.