Thursday, 12th December 2024

ಬಿಎಂಟಿಸಿ ಚಾಲಕನ ಅಜಾಗರೂಕತೆ: ಗೃಹಿಣಿ ಬಲಿ

ಬೆಂಗಳೂರು: ಬೆಂಗಳೂರಿನ ಮಡಿವಾಳದಲ್ಲಿ ಬಿಎಂಟಿಸಿ ಚಾಲಕನ ಅಜಾಗರೂಕತೆಯಿಂದಾಗಿ ಮಹಳೆಯೊಬ್ಬರು ಮೃತಪಟ್ಟಿದ್ದಾರೆ.

21 ವರ್ಷದ ಸೀಮಾ ಮೃತ ದುರ್ದೈವಿ. ಸಿಲ್ಕ್‌ ಬೋರ್ಡ್ ಜೆಂಕ್ಷನ್ ಬಳಿಯ ಮಡಿವಾಳ ಫ್ಲೈ ವೋವರ್ ಮೇಲೆ ದ್ವಿಚಕ್ರವಾಹನದಲ್ಲಿ ಮಗುವಿನೊಂದಿಗೆ ಈ ಮಹಿಳೆ ಹಾಗೂ ಪುರುಷ ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮೂರು ಜನ ಕೆಳಗೆ ಬಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಗುರುಮೂರ್ತಿ ಹಾಗೂ ಮಗು ಗಾನವಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಗುರುಮೂರ್ತಿ ಕೆಲಸ ಮಾಡುತ್ತಿದ್ದಾರೆ. ಘಟನೆ ಬಳಿಕ ತಕ್ಷಣ ಇವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾರೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.