Saturday, 14th December 2024

ಮಾ.6ರಂದು ‘ಬೆಂಗಳೂರು ಚಲೋ’

ತುಮಕೂರು: ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಮಾರ್ಚ್ 6ರಂದು ‘ಬೆಂಗಳೂರು ಚಲೋ’ ಹಮ್ಮಿಕೊಂಡಿದೆ.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಎಸ್‌.ಎನ್‌.ಸ್ವಾಮಿ ಚಳವಳಿಗೆ ಚಾಲನೆ ನೀಡಿ ಮಾತನಾಡಿ, ‘ಶಿಕ್ಷಣ, ಆರೋಗ್ಯ, ಜೀವನ ಭದ್ರತೆ ಒದಗಿಸುವುದು ಸರ್ಕಾರದ ಕನಿಷ್ಠ ಜವಾಬ್ದಾರಿ. ಪ್ರಸ್ತುತ ಸರ್ಕಾರಗಳು ಎಲ್ಲ ಸೇವಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಾ, ಜನರ ಜೀವನವನ್ನು ಮತ್ತಷ್ಟು ದುಸ್ತರ ಗೊಳಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ, ಆರೋಗ್ಯ ಉಳ್ಳವರ ಪಾಲಾಗಿದೆ. ಲಕ್ಷಾಂತರ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಯುವಕರು ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಸರ್ಕಾರಗಳು ಇಂತಹ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸದೆ ಬಂಡವಾಳ ಶಾಹಿಗಳ ಏಜೆಂಟರಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಎಸ್‌ಯುಸಿಐ ಪಕ್ಷವು ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಕಟ್ಟುತ್ತಿದೆ. ಇದರ ಭಾಗವಾಗಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಜನಪರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎಸ್‌ಯುಸಿಐ ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯರಾದ ಕಲ್ಯಾಣಿ, ರತ್ನಮ್ಮ, ಅಶ್ವಿನಿ, ಲಕ್ಕಪ್ಪ, ನವೀನ್‌, ಕೋಮಲಾ ಇತರರು ಹಾಜರಿದ್ದರು.