ಕೊಪ್ಪಳ: ಯಾರು ಬೇಕಾದರೂ ಈ ರಾಜ್ಯದ ಸಿಎಂ ಆಗಬಹುದು. ಅದರಂತರ ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಆಶೀರ್ವಾದ ಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾರ್ಮಿಕವಾಗಿ ಹೇಳಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ನಾನೂ ಲಿಂಗಾಯತ ಸಮು ದಾಯಕ್ಕೆ ಸೇರಿದ್ದೇನೆ. ಲಿಂಗಾಯತ ನಾಯಕರಲ್ಲಿ ತುಂಬಾ ಹಿರಿಯನಾಗಿದ್ದೇನೆ. ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಆಯ್ಕೆ ಆಗಿರುವ ಶಾಸಕ. ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಡುವುದಾದರೆ ನನಗೆ ಕೊಡಲಿ. ಹುದ್ದೆಯ ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ, ಯಾರು ಸಿಎಂ ಆಗಬೇಕು ಎಂಬುದನ್ನು ವರಿಷ್ಠರು, ಶಾಸಕರು ತೀರ್ಮಾನ ಮಾಡಬೇಕು. ಸಿದ್ದರಾಮಯ್ಯ ಸೂಚಿಸಿದ ವ್ಯಕ್ತಿ ಮುಂದೆ ಸಿಎಂ ಆಗುತ್ತಾರೆ ಎಂಬುದು ನನ್ನ ಅಭಿಪ್ರಾಯ. ಯಾರಿಗೆ ಯಾವಾಗ ಲಾಠರಿ ಹೊಡೆಯುತ್ತೆ ಗೊತ್ತಿಲ್ಲ. ಒಕ್ಕಲಿಗರರಲ್ಲಿ ಅನೇಕರು ಹುದ್ದೆಯ ಆಕಾಂಕ್ಷಿ ಇದ್ದಾರೆ. ಡಿ.ಕೆ.ಶಿವಕುಮಾರ್ ಕೂಡಾ ಪ್ರಮುಖ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದ ಸಿಎಂ ಆಗಬೇಕು ಎಂದು ಅನೇಕರು ಆಸೆ ಪಡುತ್ತಿದ್ದಾರೆ. ಸಿಎಂ ಹುದ್ದೆಗೆ ಆಸೆ ಪಡುವುದು ತಪ್ಪಲ್ಲ. ಆದರೆ, ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಮುಂದಿನ 3 ವರ್ಷ ಸಿಎಂ ಆಗಿರುತ್ತಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ಯಾರು ಹೇಳುತ್ತಾರೆ? ಕೋರ್ಟ್ ತನಿಖೆಗೆ ಆದೇಶ ನೀಡಿದರೂ ಸಿದ್ಧರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂಬ ಭರವಸೆ ಇದೆ ಎಂದರು.