Saturday, 14th December 2024

ಬೆಳ್ಳಾವಿಯಲ್ಲಿ ಕನಕಪತ್ತಿನ ಸಹಕಾರ ಸಂಘದ ನೂತನ ಶಾಖೆ ಉದ್ಘಾಟನೆ

ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನೂತನ ಶಾಖೆಯನ್ನು ಪ್ರಾರಂಭಿಸಲಾಯಿತು.
ನಗರದ ಕೋತಿತೋಪಿನಲ್ಲಿರುವ ಶ್ರೀ ಕನಕ ಪತ್ತಿನ ಸಹಕಾರ ಸಂಘದ ವತಿಯಿಂದ ಇಂದು ಬೆಳ್ಳಾವಿಯಲ್ಲಿ ಪ್ರಾರಂಭಿಸಲಾದ ನೂತನ ಶಾಖೆಯನ್ನು ಕಾಗಿನೆಲೆ ಮಹಾ ಸಂಸ್ಥಾನದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು, ಸಹಕಾರ ಸಂಘಗಳು ಸಾರ್ವಜನಿಕರ ಆರ್ಥಿಕ ಸಬಲತೆಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಕನಕ ಪತ್ತಿನ ಸಹಕಾರ ಸಂಘವು ಸಹ ಕಾರ್ಯೋನ್ಮುಖವಾಗಲಿ ಎಂದು ಆಶಿಸಿದರು.
ಸಹಕಾರ ಸಂಘಗಳ ಪ್ರಗತಿ ಸಂಘದ ನಿರ್ದೇಶಕರು ಪಾತ್ರ ಬಹುಮುಖ್ಯವಾಗಿದೆ. ಬಡವರು, ಆರ್ಥಿಕವಾಗಿ ಅಶಕ್ತರಾಗಿರುವ ಜನರಿಗೆ ಸಂಘದ ವತಿಯಿಂದ ಅಗತ್ಯ ಸಾಲ ಸೌಲಭ್ಯ ನೀಡುವ ಮೂಲಕ ಅವರ ಜೀವನೋಪಾಯಕ್ಕೆ ಸಹಕಾರಿಯಾಗಬೇಕು. ಅದೇ ರೀತಿ ಸಾಲ ಪಡೆದವರು ಸಹ ಆ ಹಣವನ್ನು ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ. ಇಂದ್ರಕುಮಾರ್ ಮಾತನಾಡಿ, ಕನಕ ಪತ್ತಿನ ಸಹಕಾರ ಸಂಘವು ಹೋಬಳಿ ಕೇಂದ್ರ ಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಶಾಖೆಗಳನ್ನು ತೆರೆಯಲಾಗುವುದು. ಈ ಮೂಲಕ ಗ್ರಾಮೀಣ ಭಾಗದ ಜನರ ಪ್ರಗತಿಗೆ ನೆರವಾಗುವ ಸದುದ್ದೇಶ ಹೊಂದಲಾಗಿದೆ ಎಂದರು.
ಬೆಳ್ಳಾವಿಯಲ್ಲಿ ಇಂದು ನೂತನ ಶಾಖೆ ಆರಂಭವಾಗಿದ್ದು, ಈ ಭಾಗದ ಜನತೆ ನಮ್ಮ ಸಂಘದ ಶಾಖೆಯಲ್ಲಿ ದೊರೆಯುವ ಸೌಲ ಸೌಲಭ್ಯಗಳ ಸದುಪಯೋಗಪಡೆದು ಆರ್ಥಿಕವಾಗಿ ಸಬಲರಾಗಬೇಕು. ಹಾಗೆಯೇ ಸಂಘದ ಪ್ರಗತಿಗೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕುರುಬ ಸಮುದಾಯದವರು ಆರ್ಥಿಕವಾಗಿ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಸಂಘವು ಸಹ ಹಲವು ಸೌಲಭ್ಯಗಳನ್ನು ಒದಗಿಸು ತ್ತಿದೆ. ಇದರ ಪ್ರಯೋಜನಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ  ಬಿಂದು ಶೇಖರ್ ಒಡೆಯರ್, ಸಂಘದ ಉಪಾಧ್ಯಕ್ಷ ಯೋಗೀಶ್, ತುಮಕೂರು ಮಹಾನಗರ ಪಾಲಿಕೆ ಸದಸ್ಯೆ ನಳಿನ ಇಂದ್ರಕುಮಾರ್, ಮನು, ಗೋವಿಂದರಾಜು ಸೇರಿದಂತೆ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.
ವಾರ್ಷಿಕ ಸಾಮಾನ್ಯ ಸಭೆ: ಬೆಳ್ಳಾವಿಯ ಗಂಗಮ್ಮ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಇದೇ ಸಂದರ್ಭದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ವಾರ್ಷಿಕ ಪ್ರಗತಿ ಬಗ್ಗೆ ಕುರಿತು ಚರ್ಚಿಸಲಾಯಿತು.