Friday, 22nd November 2024

N Srinivas: ಅತಂತ್ರವಾಗಿದ್ದ ಸೋಲೂರು ಹೋಬಳಿಗೆ ಮುಕ್ತಿ; ಶಾಸಕ ಎನ್. ಶ್ರೀನಿವಾಸ್ ಕಾರ್ಯಕ್ಕೆ ಜನರ ಮೆಚ್ಚುಗೆ

N Srinivas

ಬೆಂಗಳೂರು: ರಾಮನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಸೋಲೂರು (Solur) ಹೋಬಳಿಯು, ಯಾವ ಜಿಲ್ಲೆಗೆ ಸೇರಬೇಕು ಎಂದು 2 ಜಿಲ್ಲೆಯಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಆದರೆ ಸೋಲೂರು ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷಾತೀತವಾಗಿ ನೆಲಮಂಗಲ (Nelamangala) ತಾಲೂಕಿಗೆ ಸೇರ್ಪಡೆಯಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಶ್ರೀನಿವಾಸ್ (N Srinivas) ಅವರು ಚುನಾವಣೆ ಸಂದರ್ಭದಲ್ಲಿ ನುಡಿದಂತೆ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುತ್ತೇನೆ. ಸೋಲೂರು ಹೋಬಳಿಯನ್ನು ಅಭಿವೃದ್ಧಿ ಮಾಡುತ್ತೇನೆ ಎಂಬ ಭರವಸೆಯನ್ನು ನೀಡಿದ್ದರು. ಅದರಂತೆ ಸೋಲೂರು ಹೋಬಳಿಯ ಅಭಿವೃದ್ಧಿಗೆ ಈಗಾಗಲೇ 100 ಕೋಟಿಗೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ.

ಈ ಸುದ್ದಿಯನ್ನೂ ಓದಿ | Mysuru Dasara 2024: ದಸರಾ ವೇಳೆ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್‌ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ

ಅಭಿವೃದ್ಧಿಯಿಂದ ವಂಚಿತವಾಗಿದ್ದ ಸೋಲೂರು ಹೋಬಳಿಗೆ ಮುಕ್ತಿ ನೀಡುವ ಕೆಲಸಕ್ಕೆ ನೆಲಮಂಗಲ ಶಾಸಕರು ಕೈಜೋಡಿಸಿದ್ದಾರೆ. ಸೋಲೂರು ಜನತೆಯ ಬಹುದಿನದ ಕನಸಾಗಿದ್ದ ನೆಲಮಂಗಲ ತಾಲೂಕಿಗೆ ಸೇರ್ಪಡೆಗೆ ಶಾಸಕರು ಕೈಜೋಡಿಸಿದ್ದು, ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯ ಮುಖಾಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ಆಗಲಿರುವ ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಆಗುವುದರಿಂದ ಆಗುವ ಸಾದಕ ಬಾದಕಗಳ ಮಾಹಿತಿಯನ್ನು ಜರೂರಾಗಿ ನೀಡುವಂತೆ ಪತ್ರವನ್ನು ಬರೆದಿದ್ದಾರೆ.

ಅತಿ ಶೀಘ್ರದಲ್ಲಿ ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆಯಾಗುತ್ತಿರುವುದಕ್ಕೆ ಸೋಲೂರು ಭಾಗದ ಜನತೆ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಲೂರು ಇತಿಹಾಸ

ಭೌಗೋಳಿಕವಾಗಿ ಸೋಲೂರು ಗ್ರಾಮ ತನ್ನದೇ ಇತಿಹಾಸವನ್ನು ಹೊಂದಿತ್ತು. 1950 ರಲ್ಲಿ ಕುದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತ್ತು. ತಟ್ಟೆಕೆರೆ ಗ್ರಾಮದ ಮಾರಣ್ಣ ಅವರು ಶಾಸಕರಾಗಿ. 1952ರಲ್ಲಿ ಸೋಲೂರು ಗ್ರಾಮದ ಸಿದ್ದಪ್ಪನವರು ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ಕ್ಷೇತ್ರ ಪುನರ್ ವಿಂಗಡಣೆಯಿಂದ 1956 ರಿಂದ 1977 ರ ತನಕ ಮಾಗಡಿ ತಾಲೂಕಿಗೆ ಸೇರ್ಪಡೆಗೊಂಡಿತ್ತು. ಮತ್ತೆ 1978 ರಲ್ಲಿ ಸೋಲೂರು ಹೋಬಳಿಯನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಿದರು, ಅಂದಿನಿಂದ ಇಲ್ಲಿಯವರೆಗೂ ಸೋಲೂರು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮತ ಚಲಾವಣೆ ಮಾಡಿಕೊಂಡು, ಕ್ಷೇತ್ರದ ಕೆಲಸ ಕಾರ್ಯಗಳಿಗೆ ಮಾಗಡಿಗೆ ಅಲೆಯುವ ಪರಿಸ್ಥಿತಿಯು ನಿರ್ಮಾಣವಾಯಿತು. ಅಂದಿನಿಂದ ಇಂದಿನವರೆಗೂ ಹೋಬಳಿಯು ಅಭಿವೃದ್ಧಿಯಾಗದೆ ಅತಂತ್ರವಾಗಿಯೇ ಉಳಿದಿತ್ತು.

ಸೋಲೂರು ಅಭಿವೃದ್ಧಿಗೆ ವೇಗ

ನೆಲಮಂಗಲ ಶಾಸಕರಾಗಿ ಆಯ್ಕೆಯಾದ ಶಾಸಕ ಎನ್. ಶ್ರೀನಿವಾಸ್, ಸೋಲೂರು ಹೋಬಳಿಯ ಅಭಿವೃದ್ಧಿಗೆ ವೇಗ ನೀಡಿದ್ದು. ನೆನೆಗುದ್ದಿಗೆ ಬಿದ್ದಿದ್ದ ಸೋಲೂರು ಟೌನ್‌ಶಿಪ್‌ಗೆ ಸರ್ಕಾರಕ್ಕೆ ಒತ್ತಡ ತಂದು ಮತ್ತೆ ಮರುಜೀವ ನೀಡುವ ಮೂಲಕ ಸೋಲೂರು ಹೋಬಳಿಯನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದಾರೆ. ಪೆರಿಫೆರಲ್ ರಿಂಗ್ ರಸ್ತೆಯು ಸಹ ಸೋಲೂರು ಹೋಬಳಿಯ ಮುಖಾಂತರ ಹಾದು ಹೋಗಲಿದ್ದು. ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಬಲ್ಲಮೂಲಗಳ ಪ್ರಕಾರ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಸಹ ಸೋಲೂರು ಭಾಗದಲ್ಲಿ ಆಗುವುದು ಖಚಿತ ಎಂದು ಹೇಳಲಾಗುತ್ತಿದ್ದು, ಅನಾಥವಾಗಿದ್ದ ಸೋಲೂರು ಹೋಬಳಿಯ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನು ಚುನಾವಣೆ ಸಂದರ್ಭದಲ್ಲಿ ಸೋಲೂರು ಹೋಬಳಿಯನ್ನು ಅಭಿವೃದ್ಧಿ ಮಾಡುತ್ತೇನೆ, ಹಾಗೂ ಅತಂತ್ರವಾಗಿರುವ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುತ್ತೇನೆ ಎಂಬ ಭರವಸೆಯನ್ನು ಕೊಟ್ಟಿದ್ದೆ. ಅದರಂತೆ ಈಗಾಗಲೇ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅತಿ ಶೀಘ್ರದಲ್ಲೇ ಸೋಲೂರು ನೆಲಮಂಗಲ ತಾಲೂಕಿಗೆ ಸೇರ್ಪಡೆಯಾಗಲಿದೆ.

-ಶಾಸಕ ಎನ್. ಶ್ರೀನಿವಾಸ್, ನೆಲಮಂಗಲ ವಿಧಾನಸಭಾ ಕ್ಷೇತ್ರ.

ಸೋಲೂರು ಹೋಬಳಿಯು ಯಾವುದೇ ರೀತಿ ಅಭಿವೃದ್ಧಿಯಾಗದೆ ಹಿಂದುಳಿದಿತ್ತು. ಶಾಸಕ ಎನ್. ಶ್ರೀನಿವಾಸ್ ಅವರು ಚುನಾವಣೆ ಸಂದರ್ಭದಲ್ಲಿ ನುಡಿದಂತೆ ಹೋಬಳಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಮ್ಮ ಭಾಗದ ಬಹುದಿನದ ಕನಸಾದ ಸೋಲೂರು ಭಾಗವನ್ನು ನೆಲಮಂಗಲಕ್ಕೆ ಸೇರ್ಪಡೆಗೊಳಿಸುತ್ತಿರುವುದು ಸಂತಸವನ್ನುಂಟು ಮಾಡಿದೆ.

-ಎಂ. ನಾಗರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು.

ಈ ಸುದ್ದಿಯನ್ನೂ ಓದಿ | Traffic restrictions: ಬೆಂಗಳೂರಿನ ಈ ಮಾರ್ಗದಲ್ಲಿ ಇಂದಿನಿಂದ ಒಂದು ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧ

ಅಭಿವೃದ್ಧಿಯ ದೃಷ್ಟಿಯಿಂದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸುತ್ತಿರುವುದು ಸಂತಸದ ವಿಷಯ. ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ. ಪಕ್ಷಾತೀತವಾಗಿ ನಮ್ಮ ಭಾಗದ ಜನರು ಸ್ವಾಗತಿಸುತ್ತೇವೆ.

-ಚನ್ನಗಂಗಯ್ಯ, ಮಾಜಿ ಅಧ್ಯಕ್ಷರು, ಲಕ್ಕೆನಹಳ್ಳಿ ಗ್ರಾಮ ಪಂಚಾಯಿತಿ.