Thursday, 19th September 2024

ದಿನಾಂಕ ಮುಗಿದ ನಂತರವೂ ಪ್ರವೇಶಾತಿ: ಕಾಲೇಜಿಗೆ 5 ಲಕ್ಷ ರೂ. ದಂಡ

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ನಿಗದಿಪಡಿಸಿದ್ದ ಕೊನೆಯ ದಿನಾಂಕ ಮುಗಿದ ನಂತರ ವಿದ್ಯಾರ್ಥಿಗೆ ಪ್ರವೇಶಾತಿ ಮಾಡಿಕೊಂಡ ಕಾಲೇಜಿಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

ಮಂಗಳೂರು ಮೂಲದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ವಿವಿ ನಿಗದಿ ಪಡಿಸಿದ್ದ ದಿನಾಂಕ ಮುಗಿದ ನಂತರವೂ ವಿದ್ಯಾರ್ಥಿಗೆ ಪ್ರವೇಶಾತಿ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವರ್ಷ ಒಂದು ಮ್ಯಾನೇಜ್ಮೆಂಟ್ ಕೋಟಾದ ಸೀಟನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಕಾಲೇಜಿನ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.

ಇನ್ನು ಮುಂದೆ ದಿನಾಂಕ ಮುಗಿದ ನಂತರ ಯಾವುದೇ ವಿದ್ಯಾರ್ಥಿಯನ್ನು ಅಡ್ಮಿಷನ್ ಮಾಡಿಕೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕು. ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡರೆ ತನಿಖೆ ನಡೆಸಲು ವಿವಿ ಸ್ವತಂತ್ರವಾಗಿದೆ. ಅಗತ್ಯವಾದರೆ ಕಾಲೇಜಿನ ಮಾನ್ಯತೆಯನ್ನು ಸಹ ಹಿಂಪಡೆಯಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.