Sunday, 24th November 2024

ಅಕ್ರಮ ಜಾಹೀರಾತುಗಳ ಹಾವಳಿ ತಡೆಗೆ ನಿರ್ದೇಶನ ನೀಡಿ: ಪಿಐಎಲ್ ವಿಚಾರಣೆ

ಬೆಂಗಳೂರು: ನಗರದಲ್ಲಿ ಅನಧಿಕೃತ ಜಾಹೀರಾತುಗಳ ಅಳವಡಿಕೆಯ ವಿರುದ್ಧ ಕ್ರಮ ಕೈಗೊಳ್ಳದ ಹಾಗೂ ಜಾಹೀರಾತು ಅಕ್ರಮ ಅಳವಡಿಕೆ ತಡೆಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತ ಹೋರ್ಡಿಂಗ್‌ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದರೆ ಸಾಲದು. ಆ ಪ್ರಕ್ರಿಯೆ ಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆ ತಪ್ಪಿತಸ್ಥ ಅಧಿಕಾರಿ ಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭಿಸಿದ ನಂತರ ನಡೆದಿರುವ ಬೆಳವಣಿಗೆಗಳ ಮಾಹಿತಿ ನೀಡಬೇಕು.

ಬೆಂಗಳೂರು ನಗರದಾದ್ಯಂತ ಅಳವಡಿಕೆ ಆಗಿರುವ ಜಾಹೀರಾತು ಸಮೀಕ್ಷೆ ನಡೆಸಬೇಕು. ಅವುಗಳಲ್ಲಿ ಎಷ್ಟಕ್ಕೆ ಅಳವಡಿಸಲು ಅನುಮತಿ ನೀಡಲಾಗಿದೆ. ಅವುಗಳು ಬಿಬಿಎಂಪಿಗೆ ಅಗತ್ಯ ಶುಲ್ಕ ಕಟ್ಟಿವೆಯೇ, ಅಕ್ರಮ ಅಳವಡಿಕೆ ಯಾಗಿದ್ದರೆ ಅವುಗಳ ವಿರುದ್ದ ಯಾವ ಕ್ರಮ ಜರುಗಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಜಾಹೀರಾತು ಅಳವಡಿಕೆಗೆ ಅನುಮತಿ ನೀಡಲಾಗಿದೆ. ಜಾಹೀರಾತುದಾರರು ಎಷ್ಟು ಹಣ ಶುಲ್ಕ ಪಾವತಿ ಮಾಡಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುಂತೆ ಬಿಬಿಎಂಪಿಗೆ ನಿರ್ದೇಶನ ವಿಚಾರಣೆ ಮುಂದೂಡಿತು.

ಈ ಹಿಂದೆ ವಿಚಾರಣೆ ನಡೆಸಿದ ನ್ಯಾಯಪೀಠ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಗರದಲ್ಲಿ ಅನಧಿಕೃತವಾಗಿ ಸುಮಾರು 60 ಸಾವಿರ ಜಾಹೀರಾತು ಫಲಕಗಳು ಅಳವಡಿಕೆಯಾಗಿವೆ. ಅದರಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯಲು ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಈ ಹಾವಳಿ ತಡೆಯಲು ವಿಫಲವಾಗಿರುವ ಅಧೀನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.