Thursday, 12th December 2024

ಸಮಾನ ಅವಕಾಶ ಒದಗಿಸಲು, ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್‌ ಪಂದ್ಯ ಆಯೋಜಿಸಿದ್ದ ಅಮೆಜಾನ್‌

* ಪಂದ್ಯ ಗೆದ್ದ ಸಮರ್ಥನಂ ಟ್ರಸ್ಟ್‌ನ ತಂಡಕ್ಕೆ ₹ 1 ಲಕ್ಷ ನಗದು ಬಹುಮಾನ ವಿತರಣೆ
* ಕ್ರಿಕೆಟ್‌ ಮೈದಾನದಲ್ಲಿ ದೃಷ್ಟಿಹೀನ ಆಟಗಾರರಿಗೆ ಮಾರ್ಗದರ್ಶನ ನೀಡಲು ಧ್ವನಿ ಹೊರಡಿಸುವ ಕ್ರಿಕೆಟ್ ಚೆಂಡು ಬಳಸಲಾಗಿತ್ತು.
* 2024ರ ಮೇನಲ್ಲಿ ಆಚರಿಸಲಾದ ಅಮೆಜಾನ್‌ನ ಜಾಗತಿಕ ʼಸ್ವಯಂಸೇವಕ ಮಾಸಾಚರಣೆʼಯ ಅಂಗವಾಗಿ ಈ ಪಂದ್ಯ ಏರ್ಪಡಿಸಲಾಗಿತ್ತು
* ಸಮರ್ಥನಂ ಟ್ರಸ್ಟ್‌ನ ಸಹಯೋಗದಲ್ಲಿ ಅಮೆಜಾನ್ ಇಂಡಿಯಾ ಅಂಗವಿಕಲರ ವಿಶಿಷ್ಟ ಸಾಮರ್ಥ್ಯಕ್ಕೆ ವ್ಯಾಪಕ ಪ್ರಚಾರ ನೀಡಿ ಅವರನ್ನು ಸಬಲೀಕರಣಗೊಳಿಸಲಿದೆ

ಬೆಂಗಳೂರು: ಅಂಗವಿಕಲರ ಸಬಲೀಕರಣಕ್ಕೆ ಬದ್ಧವಾಗಿರುವ ಲಾಭರಹಿತ ಪ್ರಮುಖ ಸಂಸ್ಥೆಯಾಗಿರುವ ಸಮರ್ಥನಂ ಟ್ರಸ್ಟ್, ಅಮೆಜಾನ್‌ಡಾಟ್‌ಇನ್‌ (Amazon.in) ಸಹಯೋಗದಲ್ಲಿ ಇಂದು ಬೆಂಗಳೂರಿನಲ್ಲಿ ಅಂಧರಿಗಾಗಿ ವಿಶಿಷ್ಟ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು.

ಮೇ ತಿಂಗಳಲ್ಲಿ ಅಮೆಜಾನ್‌ನ ಸ್ವಯಂಸೇವೆಯ ಜಾಗತಿಕ ಮಾಸಾಚರಣೆಯ ಭಾಗವಾಗಿ ಈ ಕ್ರಿಕೆಟ್‌ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ವಿಶಿಷ್ಟ ಕ್ರಿಕೆಟ್‌ ಪಂದ್ಯವು ವಿಕಲಚೇತನರಿಗೂ ಕ್ರೀಡೆಗಳಲ್ಲಿ ಸಮಾನ ಅವಕಾಶ ಒದಗಿಸುವ ಮತ್ತು ಅವರನ್ನು ಸಬಲೀಕರಣಗೊಳಿಸುವ ಆಶಯದ ಪ್ರತೀಕ ವಾಗಿದೆ.

ಈ ಉಪಕ್ರಮದ ಭಾಗವಾಗಿ, ತಂಡವು ಎರಡು ಪಂದ್ಯಗಳಲ್ಲಿ ಭಾಗವಹಿಸಿತು. ಮೊದಲ ಪಂದ್ಯದ ತಂಡಗಳಲ್ಲಿ ಅಮೆಜಾನ್ ಸ್ವಯಂಸೇವಕರು ಮತ್ತು ದೃಷ್ಟಿಹೀನ ಆಟಗಾರರು ಸಮಾನವಾಗಿ ಭಾಗವಹಿಸಿದ್ದರು. ಎರಡನೆಯ ಪಂದ್ಯದಲ್ಲಿ ಅಮೆಜಾನ್ ಸ್ವಯಂಸೇವಕರು ಒಂದು ತಂಡದಲ್ಲೊದ್ದರೆ, ಇನ್ನೊಂದು ತಂಡದಲ್ಲಿ ದೃಷ್ಟಿಹೀನರು ಇದ್ದರು. ಸಮರ್ಥನಂ ತಂಡವು ಅಸಾಧಾರಣ ಪ್ರದರ್ಶನ ನೀಡಿ ಪಂದ್ಯದಲ್ಲಿ ಗೆಲುವು ಸಾಧಿಸಿತು. ಕ್ರೀಡಾ ಕೌಶಲ್ಯ ಮತ್ತು ಪಂದ್ಯಗಳ ಉದ್ದಕ್ಕೂ ಪ್ರದರ್ಶಿಸಿದ ಅಸಾಧಾರಣ ಕೌಶಲಗಳಿಗಾಗಿ ಸಮರ್ಥನಂ ತಂಡಕ್ಕೆ ವಿಜೇತ ಟ್ರೋಫಿ ಮತ್ತು ₹ 1 ಲಕ್ಷದ ನಗದು ಬಹುಮಾನ ನೀಡಲಾಯಿತು.

ಈ ಪಂದ್ಯದ ಇನ್ನೊಂದು ವೈಶಿಷ್ಟತೆ ಏನೆಂದರೆ, ದೃಷ್ಟಿದೋಷ ಹೊಂದಿರುವ ಆಟಗಾರರಿಗೆ ಸಹಾಯ ಮಾಡಲು ಧ್ವನಿ- ಹೊರಡಿಸುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕ್ರಿಕೆಟ್ ಚೆಂಡು ಬಳಸಲಾಗಿತ್ತು. ಇದು ದೃಷ್ಟಿಹೀನರಿಗೆ ಕ್ರಿಕೆಟ್‌ ಆಟ ಆಡುವುದನ್ನು ಹೆಚ್ಚು ಸುಲಭಗೊಳಿಸಿತ್ತು ಮತ್ತು ಪಂದ್ಯದಲ್ಲಿ ತೊಡಗಿಸಿಕೊಳ್ಳಲು ನೆರವಾಗಿತ್ತು.

2024ರ ಮೇ ತಿಂಗಳಲ್ಲಿ ಸ್ವಯಂಸೇವೆಯ ಜಾಗತಿಕ ತಿಂಗಳನ್ನು ಆಚರಿಸಲಾಗುತ್ತಿರುವಾಗ, ಭಾರತದ ವಿವಿಧ ನಗರಗಳಲ್ಲಿ ಇಂತಹ ಉಪಕ್ರಮ ಹಮ್ಮಿ ಕೊಳ್ಳಲಾಗಿತ್ತು. ಸ್ವಯಂಸೇವಕರ ಪಾಲ್ಗೊಳ್ಳುವಿಕೆ ಹಾಗೂ ಸಮುದಾಯ ಜೊತೆಗಿನ ಸಂವಹನ ಉಪಕ್ರಮಗಳನ್ನು ವರ್ಷಪೂರ್ತಿ ಆಯೋಜಿಸಲು ಅಮೆಜಾನ್‌ ಬದ್ಧವಾಗಿದೆ. ಸಮುದಾಯಕ್ಕೆ ಏನನ್ನಾದರೂ ಮರಳಿಸುವ ಮನೋಭಾವವು ಕಂಪನಿಯ ಸಂಸ್ಕೃತಿಯ ಒಳಗೆ ಹಾಸುಹೊಕ್ಕಾಗಿರುವುದು ಮುಂದುವರೆದಿದೆ. ಅಮೆಜಾನ್‌ ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ನಿರಂತರವಾಗಿ ಸಕಾರಾತ್ಮಕ ಪ್ರಭಾವ ಬೀರಲು ಬದ್ಧವಾಗಿದೆ.

ʼಸ್ವಯಂ ಸೇವೆಯ ಜಾಗತಿಕ ಮಾಸʼ ಆಚರಣೆಯು (ಜಿಎಂವಿ) ವಾರ್ಷಿಕ ಜಾಗತಿಕ ಕಾರ್ಯಕ್ರಮವಾಗಿದ್ದು, ಅಮೆಜಾನ್‌ನ ಉನ್ನತ ಅಧಿಕಾರಿಗಳು, ಉದ್ಯೋಗಿಗಳು, ಪಾಲುದಾರರು ಮತ್ತು ವಿಶ್ವದಾದ್ಯಂತದ ಕೆಲವು ಗ್ರಾಹಕರು ಸಹ ರಚನಾತ್ಮಕ ಬದಲಾವಣೆ ತರುವ ಈ ಕಾರ್ಯಕ್ರಮಗಳನ್ನು ಬೆಂಬಲಿ ಸಲು ಕೈಜೋಡಿಸಿದ್ದಾರೆ. ಭಾರತದಲ್ಲಿ ತನ್ನ ʼಸ್ವಯಂ ಸೇವೆಯ ಜಾಗತಿಕ ಮಾಸಾಚರಣೆʼಯ ಮೂರನೇ ವರ್ಷದಲ್ಲಿ, ʼಜಿಎಂವಿ – 2024ʼ ಅಮೆಜಾನ್‌ನ ಮುಖ್ಯ ಧ್ಯೇಯಗಳಾದ ಶಿಕ್ಷಣ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಮಹಿಳಾ ಸಬಲೀಕರಣದ ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದೆ.

ಶಿಕ್ಷಣ, ಸ್ಪೂರ್ತಿ ಮತ್ತು ಸಂಪರ್ಕದ ಮೂರು ಮುಖ್ಯ ಉದ್ದೇಶಗಳೊಂದಿಗೆ ʼಜಿಎಂವಿ-2024 ಮೇʼ ಈ ವರ್ಷಪೂರ್ತಿ ನಡೆಯಲಿದೆ.

ಭಾರತದಾದ್ಯಂತ 150ಕ್ಕೂ ಹೆಚ್ಚು ಸ್ವಯಂಸೇವೆಯ ಕಾರ್ಯಕ್ರಮಗಳನ್ನು ಅಮೆಜಾನ್‌ ಆಯೋಜಿಸಲಿದೆ. ಲಾಭದ ಉದ್ದೇಶ ಹೊಂದಿಲ್ಲದ 40ಕ್ಕೂ ಹೆಚ್ಚು ಸಂಘಟನೆಗಳು ಈ ಕಾರ್ಯಕ್ರಮಗಳಲ್ಲಿ ಅಮೆಜಾನ್‌ ಜೊತೆ ಕೈಜೋಡಿಸಿವೆ. ಡೊನೇಟ್‌ಕಾರ್ಟ್, ರೋಸಿ ಬ್ಲ್ಯೂ ಫೌಂಡೇಷನ್, ವೇ ಫಾರ್ ಲೈಫ್, ಗಿವ್ ಫೌಂಡೇಷನ್, ಭೂಮಿ, ರಾಬಿನ್ ಹುಡ್ ಆರ್ಮಿ, ಕ್ರೈ, ಹೆಲ್ಪಿಂಗ್ 2 ಹ್ಯಾಂಡ್ಸ್, ಇಂಡಿಯನ್ ರೂಟ್ಸ್ ಫೌಂಡೇಷನ್, ರ‍್ಯಾಂಪ್‌ ಮೈ ಸಿಟಿ, ವೇದಾಂಶಿ ಫೌಂಡೇಷನ್ ಮತ್ತು ಖುಷಿ ಮುಂತಾದ ಸೇವಾ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ.