ಬೆಂಗಳೂರು: ತನಗೆ ಇಂಟರ್‌ವ್ಯೂನಲ್ಲಿ ಕೆಲಸ ಸಿಕ್ಕಿಲ್ಲ ಎಂದು ಹತಾಶನಾದ ಸೈಕೋ ಪ್ರಯಾಣಿಕನೊಬ್ಬ ತನಗೆ ಯಾವ ರೀತಿಯಲ್ಲೂ ಸಂಬಂಧವೇ ಇಲ್ಲದ ಬಿಎಂಟಿಸಿ ಕಂಡಕ್ಟರ್ (BMTC Conductor) ಒಬ್ಬರಿಗೆ ಸಿಕ್ಕಸಿಕ್ಕಂತೆ ಚಾಕುವಿನಿಂದ (Stabbing, Assault case) ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಕಂಡಕ್ಟರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆ ಬೆಂಗಳೂರಿನ (Bangalore news) ವೈಟ್ಫೀಲ್ಡ್ ಬಳಿಯ ITPL ಬಸ್ ಸ್ಟಾಪ್ ಬಳಿ ನಡೆದಿದೆ. ನಿನ್ನೆ ಸಂಜೆ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ KA- 57-F0015 ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ಗೆ ಅಪರಿಚಿತ ವ್ಯಕ್ತಿ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಪ್ರಯಾಣಿಕರು ತುಂಬಿದ್ದ ಬಸ್ ನಲ್ಲಿ ಈ ದುಷ್ಕೃತ್ಯ ನಡೆದಿದೆ.
ಕಂಡಕ್ಟರ್ ಯೋಗೇಶ್ಗೆ ಎರಡು ಮೂರು ಬಾರಿ ಚಾಕುವಿನಿಂದ ಇರಿದ ಬಳಿಕ ಬಸ್ನಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಗಾಜು ಪುಡಿಗಟ್ಟಿ ಹುಚ್ಚನಂತೆ ವರ್ತಿಸಿದ್ದಾನೆ. ಇದನ್ನು ನೋಡಿದ ಸಹ ಪ್ರಯಾಣಿಕರು ಕಿರುಚಾಡಿಕೊಂಡು ಬಸ್ಸಿನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಟ್ಫೀಲ್ಡ್ ಠಾಣೆ ಪೊಲೀಸರು ಧಾವಿಸಿದ್ದು, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿರುವ ಕಂಡಕ್ಟರ್ ಯೋಗೇಶ್ ಅವರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಕು ಇರಿದ ಪ್ರಯಾಣಿಕ ಇಂದು ಬೆಳಿಗ್ಗೆ ಖಾಸಗಿ ಕಂಪನಿಗೆ ಇಂಟರ್‌ವ್ಯೂಗೆ ಹೋಗಿದ್ದನಂತೆ. ಈ ವೇಳೆ ಆತನಿಗೆ ಕೆಲಸ ಸಿಕ್ಕಿಲ್ಲ. ಅದಕ್ಕಾಗಿ ಹತಾಶನಾದ ಆತ, ನಾನು ಹೊರಗೆ ಇರುವುದಿಲ್ಲ. ಜೈಲಿಗೆ ಹೋಗುತ್ತೇನೆ ಎಂದು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Theft Case: ಮಂತ್ರಾಲಯಕ್ಕೆ ಹೋದವರ ಮನೆಗೆ ಕನ್ನ ಹಾಕಿದ್ದವ, ಮಂಜುನಾಥನ ದರ್ಶನಕ್ಕೆ ಹೋಗಿ ಸಿಕ್ಕಿಬಿದ್ದ!