ಬೆಂಗಳೂರು: ಇವಿ ಬಳಕೆದಾರರಿಗೆ ಸುಗಮ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತಿರುವ ಬೆಸ್ಕಾಂನ ‘ಇವಿ ಮಿತ್ರ’ ಆ್ಯಪ್ ಈಗ ಹೊಸ ರೂಪ (BESCOM EV Mitra App) ಪಡೆದುಕೊಂಡಿದೆ. ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಮಾಹಿತಿ ಲಭ್ಯವಾಗಲಿದೆ.
ಆ್ಯಂಡ್ರಾಯ್ಡ್ ಮತ್ತು ಐಓಎಸ್ ಎರಡು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಹೊಸ ‘ಇವಿ ಮಿತ್ರ’ ಆ್ಯಪ್- ಬಳಕೆದಾರರ ಪ್ರೊಫೈಲ್ ನಿರ್ವಹಣೆ, ಚಾರ್ಚಿಂಗ್ ಸ್ಟೇಷನ್‌ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್ ಪ್ರಕ್ರಿಯೆ, ಬುಕ್ಕಿಂಗ್ ವಿವರ, ಚಾರ್ಚಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್ ಕಾಯ್ದಿರಿಸುವ ಸೌಲಭ್ಯ ಹೊಂದಿದೆ.
ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಹಳೆ ‘ಇವಿ ಮಿತ್ರ’ ಆ್ಯಪ್ ಡಿಲೀಟ್ ಮಾಡಿ, https://onelink.to/evmithra ಮೂಲಕ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ವ್ಯಾಲೆಟ್‌ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ. ಹೊಸ ಆ್ಯಪ್‌ಗೆ ಹಣ ವರ್ಗಾವಣೆಯಾಗುತ್ತದೆ.
ಈ ಸುದ್ದಿಯನ್ನೂ ಓದಿ | HC Mahadevappa: ಸರ್ಕಾರದ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ; ಅಧಿಕಾರಿಗಳಿಗೆ ಮಹದೇವಪ್ಪ ಸೂಚನೆ
ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿ ಒಟ್ಟು 11 ಭಾಷೆಗಳಲ್ಲಿ ಇವಿ ಚಾರ್ಚಿಂಗ್ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. ರಿಟೇಲ್ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಇರಲಿದೆ. ಬಳಕೆದಾರರ ಸ್ನೇಹಿಯಾಗಿರುವ ಆ್ಯಪನ್ನು ಈಗಾಗಲೇ 15,000ಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಬಳಕೆ ಹೇಗೆ?
ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ಫೋನ್ ನಂಬರ್ ನಮೂದಿಸಿ, ಲಾಗಿನ್ ಆಗಿ. ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆ ದಾಖಲಿಸಿದ ನಂತರ ನಿಮ್ಮ ಲಾಗಿನ್ ಖಾತ್ರಿಯಾಗುವುದು. ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್ ಮೂಲಕ ಚಾರ್ಜಿಂಗ್ ಸೌಲಭ್ಯ ಪಡೆಯಬಹುದಾಗಿದೆ. ಎಸಿ/ಡಿಸಿ ಚಾರ್ಜರ್ ಅಥವಾ ಮ್ಯಾಪ್ ಮೂಲಕ ಇವಿ ಬಳಕೆದಾರರು ಚಾರ್ಜಿಂಗ್ ಸ್ಟೇಷನ್ ಇರುವ ಜಾಗದ ಮಾಹಿತಿ ಪಡೆಯಬಹುದು.
ಸುಲಭ ಪಾವತಿ ಹಾಗೂ ಮರು ಪಾವತಿ
ರಿಟೇಲ್ ಬಳಕೆದಾರರು ಆ್ಯಪ್‌ನಲ್ಲಿ ಲಭ್ಯವಿರುವ ವಾಲೆಟ್‌ಗೆ ಹಣ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು. ಯುಪಿಐ (ಗೂಗಲ್/ಫೋನ್ ಪೇ) ಮೂಲಕವೂ ಪಾವತಿ ಮಾಡಬಹುದು. ಬಿಲ್ ಡೆಸ್ಕ್ ಮೂಲಕವೂ ಶುಲ್ಕ ಪಾವತಿಗೂ ಅವಕಾಶವಿದೆ. ಚಾರ್ಚಿಂಗ್ ಸಮಯದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗಿ ಚಾರ್ಜಿಂಗ್ ನಿಂತರೆ, ಬಳಕೆದಾರರಿಗೆ ಹಣ ಮರು ಪಾವತಿಯಾಗಲಿದೆ.
ವಾಣಿಜ್ಯ ಬಳಕೆದಾರಿಗೂ ವಿಶೇಷ ಸೌಲಭ್ಯ ಇದ್ದು, ತಮ್ಮ ವಾಹನಗಳ ಚಾಲಕರ ಚಲನೆ/ಚಾರ್ಜಿಂಗ್ ವಿವರದ ಬಗ್ಗೆ ನಿಗಾವಹಿಸಬಹುದು. ಸ್ಪೆಷಲ್ ಆ್ಯಕ್ಸಿಸ್ ಕೋಡ್ ಅಲ್ಲದೇ ಇನ್ನಿತರ ವಿಶೇಷ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ವಾಟ್ಸಾಪ್ ಬೆಂಬಲ
ಯಾವುದೇ ಚಾರ್ಜಿಂಗ್ ಅಪ್ಲಿಕೇಶನ್ ಇಲ್ಲದೆಯೂ ಇವಿ ವಾಹನಗಳ ಚಾರ್ಜ್ ಮಾಡಲು ಬೆಸ್ಕಾಂ ‘ಇವಿ ಮಿತ್ರ ಬಾಟ್’- ವಾಟ್ಸಾಪ್ ನೆರವು ಪಡೆಯಬಹುದಾಗಿದ್ದು, ಲಿಂಕ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಲ್ಪಿಸುವ ನೋಡೆಲ್ ಏಜೆನ್ಸಿಯಾಗಿದೆ. ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಜಾಲ ವಿಸ್ತರಣೆ ಮತ್ತು ಉತ್ತಮ ನಿರ್ವಹಣೆಗೆ ಒತ್ತು ನೀಡುವ ಬೆಸ್ಕಾಂ ಈ ಹೊಸ ಇಂಟರ್‌ಫೇಸನ್ನು ಗ್ರಾಹಕರಿಗೆ ಪರಿಚಯಿಸಿದೆ. ಇವಿ ಬಳಕೆದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಬಳಕೆದಾರರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬುದೇ ಸಂತಸದ ವಿಷಯ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Sandalwood News: ನೂರೆಂಟು ಗಣೇಶನ ದರ್ಶನ ಪಡೆದ ʼಮಿ. ರಾಣಿʼ ಚಿತ್ರತಂಡ!
“ಇವಿ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿರುವ ಕರ್ನಾಟಕ ಇದೀಗ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವು ಇಂಧನ ಕ್ಷೇತ್ರವನ್ನು ಮುಂಚೂಣಿಯತ್ತ ಕೊಂಡೊಯ್ಯಲು ನೆರವಾಗಲಿದೆ.”
-ಕೆ.ಜೆ. ಜಾರ್ಜ್, ಇಂಧನ ಸಚಿವರು.