Sunday, 15th December 2024

ವಿಶ್ವ ಹೃದಯ ದಿನದ ಪೂರ್ವಭಾವಿಯಾಗಿ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರಿಗೆ ಬಿಎಲ್‌ಎಸ್‌ ತರಬೇತಿ ಕಾರ್ಯಾಗಾರ

ಬೆಂಗಳೂರು: ಹಠಾತ್‌ ಹೃದಯಾಘಾವಾದ ಸಂದರ್ಭದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌) ಮಾಡುವುದು ಸೇರಿದಂತೆ ತುರ್ತು ಆರೋಗ್ಯ ಚಿಕಿತ್ಸೆಗಳ ಕುರಿತು ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಫ್ರೆಸ್‌ಕ್ಲಬ್‌ನಲ್ಲಿ ಸುಮಾರು ೧೦೦ ಪತ್ರಕರ್ತ ರಿಗೆ ಬೇಸಿಕ್‌ ಲೈಫ್‌ ಸಪೋರ್ಟ್‌ (ಬಿಎಲ್‌ಎಸ್‌) ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತ್ತು.

ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ವತಿಯಿಂದ “ವಿಶ್ವ ಹೃದಯ ದಿನ”ದ ಪೂರ್ವಭಾವಿಯಾಗಿ ಸಿಪಿಆರ್‌ ಸೇರಿದಂತೆ ಬಿಎಲ್‌ಎಸ್‌ ಪ್ರಾಯೋಗಿಕ ತರಬೇತಿಯನ್ನು ನುರಿತ ಹೃದಯತಜ್ಞರು ನೀಡಿದರು.

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದೆ. BLS ಒಂದು ಪ್ರಾಯೋಗಿಕ ಜೀವ ಉಳಿಸುವ ತಂತ್ರವಾಗಿದ್ದು, ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಜೀವನವನ್ನು ಉಳಿಸಿಕೊಳ್ಳಲು ಅಗತ್ಯವಾದ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (CPR), ಪ್ರಥಮ ಚಿಕಿತ್ಸೆ ಮತ್ತು ಇತರ ನಿರ್ಣಾಯಕ ಕೌಶಲ್ಯಗಳನ್ನು ತರಬೇತಿಯಲ್ಲಿ ಹೇಳಿಕೊಡಲಾಯಿತು.

ಜೊತೆಗೆ, ಮಾಧ್ಯಮ ಸಿಬ್ಬಂದಿಗೆ ಹೃದಯಾಘಾತವಾದ ಸಂದರ್ಭದಲ್ಲಿ CPR ನ ಮೂಲಕ ಜೀವ ಉಳಿಸುವ ಕ್ರಮದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ಸಿಪಿಆರ್‌ ಹೃದಯ ಸ್ತಂಭನವಾದ ಕೂಡಲೇ ವ್ಯಕ್ತಿಯನ್ನು ಬದುಕುಳಿಸುವ ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು. ಇದಲ್ಲದೇ, ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು, ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ಣಯಿಸುವುದು ಮತ್ತು ವೃತ್ತಿಪರ ವೈದ್ಯಕೀಯ ನೆರವು ಲಭ್ಯವಾಗುವವರೆಗೆ ತಕ್ಷಣದ ಆರೈಕೆಯನ್ನು ಹೇಗೆ ಒದಗಿಸುವುದು ಎಂಬುದರ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಲಾಯಿತು. ಹೃದಯಾಘಾತ ಅಥವಾ ಹೃದಯಾಘಾತದ ತುರ್ತು ಸಮಯ ದಲ್ಲಿ ಆರಂಭಿಕ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆಯ ಪ್ರಾಮುಖ್ಯತೆಯ ಕುರಿತು ಒಳನೋಟವನ್ನು ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ನಿರ್ದೇಶಕರಾದ ಡಾ ರಾಜ್‌ಪಾಲ್ ಸಿಂಗ್ ವಿವರಿಸಿದರು.

ಬೇಸಿಕ್ ಲೈಫ್ ಸಪೋರ್ಟ್ ಕೌಶಲ್ಯಗಳ ಬಗ್ಗೆ ಮಾತನಾಡಿದ ಎಮರ್ಜೆನ್ಸಿ ಮೆಡಿಸನ್‌ ವಿಭಾಗದ ಮುಖ್ಯಸ್ಥರಾದ ಡಾ. ಇ. ಕುಮಾರಸ್ವಾಮಿ, ಈ ಕಾಲಘಟ್ಟದಲ್ಲಿ ಹೃದಯ ಕಾಯಿಲೆಗಳು ಸಾರ್ವಕಾಲಿಕವಾಗಿದೆ. ವಿಶೇಷವಾಗಿ ಯುವ ಜನರಲ್ಲಿ. ಹೃದಯಾ ಘಾತ ಅಥವಾ ಹೃದಯಾಘಾತದ ತುರ್ತು ಸಮಯದಲ್ಲಿ ಆರಂಭಿಕ ಗುರುತಿಸುವಿಕೆ ಅತಿ ಮುಖ್ಯ. ಹೃದಯದ ವಿಷಯಗಳಿಗೆ ಬಂದಾಗ ಸಮಯವು ನಿರ್ಣಾಯಕವಾಗಿರಲಿದೆ. ಎದೆ ನೋವು, ಉಸಿರಾಟದ ತೊಂದರೆ, ಅಥವಾ ಅಸ್ವಸ್ಥತೆಯಂತಹ ರೋಗ ಲಕ್ಷಣಗಳನ್ನು ಗುರುತಿಸುವುದು ಮತ್ತು ತಕ್ಷಣದ ಸಹಾಯವನ್ನು ಪಡೆಯುವುದು ಆ ವ್ಯಕ್ತಿಯ ಜೀವ ಉಳಿಸಲು ಹೆಚ್ಚು ಪರಿಣಾಮ ಕಾರಿಯಾಗಿರಲಿದೆ. ಕೆಲವರಿಗೆ ಆ ಕ್ಷಣಕ್ಕೆ ಸಿಪಿಆರ್‌ನ ಅವಶ್ಯಕತೆಯೂ ಬೀಳಬಹುದು,

ಆದರೆ, ಬಹುತೇಕರಿಗೆ ಸಿಪಿಆರ್‌ನನ್ನು ಸರಿಯಾದ ರೀತಿಯಲ್ಲಿ ಮಾಡಲು ಬರುವುದಿಲ್ಲ. ಹೀಗಾಗಿ ಸೂಕ್ತ ರೀತಿಯಲ್ಲಿ ಹೃದಯಾ ಘಾತ ವ್ಯಕ್ತಿಗೆ ಸಿಪಿಆರ್‌ ಮಾಡುವ ವಿಧಾನವನ್ನು ಪತ್ರಕರ್ತರಿಗೆ ಹೇಳಿಕೊಡಲಾಯಿತು ಎಂದರು. ಈ ವಿಧಾನದಿಂದ ಹೃದಯ ಘಾತ ಸಂಪೂರ್ಣವಾಗಿ ನಿಲ್ಲದೇ ಹೋದರೂ ಹೃದಯಕ್ಕಾಗುವ ಬಹುದೊಡ್ಡ ಅಪಾಯವನ್ನು ತಡೆಯುವಲ್ಲಿ ಸಹಕಾರಿಯಾಗ ಲಿದೆ ಎಂದು ವಿವರಿಸಿದರು.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕ ಡಾ ರಾಜ್‌ಪಾಲ್ ಸಿಂಗ್ ಮಾತನಾಡಿ, “ಹೃದಯಾಘಾತ ಯಾವ ಸಂದರ್ಭದಲ್ಲಿ ಯಾರಿಗೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಎದೆ ನೋವು, ಉಸಿರಾಟದ ತೊಂದರೆ ಮತ್ತು ಅತಿಯಾದ ಆಯಾಸ ಸೇರಿದಂತೆ ಕೆಲವು ಲಕ್ಷಣಗಳು ಕಂಡು ಬಂದ ಕೂಡಲೇ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಹೃದಯಾಘಾತದ ಮುನ್ನೆಚ್ಚರಿಕೆ ಅರಿಯಲು ಆಗಾಗ್ಗೇ ಇಸಿಜಿ ಪರೀಕ್ಷೆ ಗಳನ್ನು ಮಾಡಿಸಿಕೊಳ್ಳುವುದು, ನಿಮ್ಮ ದೇಹದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ ಪ್ರಮಾಣ ತಿಳಿದುಕೊಳ್ಳುವುದು ಅವಶ್ಯಕ. ಇದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು ಎಂದರು.

ಮತ್ತೊಂದೆಡೆ, ನಮ್ಮ ಜೀವನ ಶೈಲಿಯೂ ಸಹ ನಮ್ಮ ಹೃದಯದ ಮೇಲೆ ಗಾಢ ಪರಿಣಾಮ ಬೀರಲಿದೆ. ಸಮತೋಲಿತ ಆಹಾರ, ವ್ಯಾಯಾಮ ಮತ್ತು ಒತ್ತಡಕ್ಕೆ ಒಳಗಾಗದೇ ಇರುವುದು ಧೂಮಪಾನ ಹಾಗೂ ಮದ್ಯಪಾನ ಮಾಡದೇ ಇರುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಲಿದೆ. ಜೊತೆಗೆ, ಹೃದಯಾಘಾತವಾದ ಸಂದರ್ಭದಲ್ಲಿ ಯಾವ ರೀತಿಯ ತುರ್ತುಕ್ರಮ ಕೈಗೊಳ್ಳಬೇಕು ಎಂಬ ಸಾಮಾನ್ಯ ಅರಿವನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂದು ಮಾಹಿತಿ ನೀಡಿದರು.

ಎಲ್ಲೆಡೆ ಬಿಎಲ್‌ಎಸ್‌ ತರಭೇತಿ
ಮಾಧ್ಯಮ ಸಿಬ್ಬಂದಿಗೆ BLS ತರಬೇತಿ ಕಾರ್ಯಾಗಾರದ ಜೊತೆಗೆ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯುವ ಸಾರ್ವಜನಿಕರಿಗೆ BLS ತರಬೇತಿಯನ್ನು ಸಹ ಆಯೋಜಿಸಿವೆ, 2000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಕರು, ಸಂಚಾರ ಪೊಲೀಸರು, RWA ಉದ್ಯೋಗಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ತರಬೇತಿ ನೀಡಲಾಗಿದೆ.