ಬೆಂಗಳೂರು: ನ.30ರಂದು ನಡೆಯಲಿರುವ ತೆಲಂಗಾಣ ಚುನಾವಣೆಯ ಪ್ರಚಾರದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಾನ ಪಡೆದುಕೊಂಡಿದ್ದಾರೆ.
ಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 40 ಸ್ಟಾರ್ ಪ್ರಚಾರಕರ ಪೈಕಿ ಕರ್ನಾಟಕದಿಂದ ಯಡಿಯೂರಪ್ಪ ಕೂಡ ಇದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ವೈಗೆ ಪ್ರಮುಖ ಪಾತ್ರ ನೀಡಿರಲಿಲ್ಲ. ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿತ್ತು ಎಂಬ ಅಭಿಪ್ರಾಯವೂ ಕೇಳಿ ಬಂದಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬೆನ್ನಲ್ಲೇ ಯಡಿಯೂರಪ್ಪನವರನ್ನು ಕಡೆಗಣಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ತೆಲಂಗಾಣ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ.
80 ವರ್ಷ ಸಮೀಪಿಸುತ್ತಿರುವ ಯಡಿಯೂರಪ್ಪ ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ, ಆದರೆ ಅವರ ವರ್ಚಸ್ಸು ಕುಗ್ಗಿಲ್ಲ, ಹೀಗಾಗಿ ಮತದಾರರನ್ನು ಓಲೈಸಲು ಮುಂಬರುವ ದಿನಗಳಲ್ಲಿ ತೆಲಂಗಾಣಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.
ಕರ್ನಾಟಕದಿಂದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ ಸೇರಿದಂತೆ ನಾಲ್ವರು ಕೇಂದ್ರ ಸಚಿವರಿದ್ದರೂ, ಬಿಜೆಪಿ ಪಕ್ಷದ ಹೈಕಮಾಂಡ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಆಯ್ಕೆ ಮಾಡಿದೆ.
80 ವರ್ಷದ ಯಡಿಯೂರಪ್ಪ ಅವರು ಅದೇ ಉತ್ಸಾಹದಿಂದ ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಮತ್ತು ಅವರು ತೆಲಗಾಣದಲ್ಲಿಯೂ ಅದೇ ರೀತಿ ಮಾಡಲು ಹೊರಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.