Saturday, 14th December 2024

ಬಜೆಟ್ ಮಂಡನೆಗೆ ಕ್ಷಣಗಣನೆ…

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಎರಡನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.

ಬೆಳಗ್ಗೆ 10.15 ಕ್ಕೆ 2023 ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಬಜೆಟ್ ಮಂಡನೆಗೆ ಮೊದಲು ಸಿಎಂ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಮಂಡನೆಗೆ ಮೊದಲು ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.

ಬಜೆಟ್ ನಿರೀಕ್ಷೆಗಳು:

ಬಡವರು, ರೈತರು, ದುಡಿಯುವ ವರ್ಗ, ದೀನ ದಲಿತರಿಗೆ ಅನುಕೂಲವಾಗುವ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಸಾಂಪ್ರದಾಯಿಕ ವೃತ್ತಿ ಮಾಡಲಿಚ್ಛಿಸಿದರೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ರಾಜ್ಯ ದಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ವಿಸ್ತರಿಸಿ ಶೂನ್ಯ ಬಡ್ಡಿ ದರದ ಸಾಲವನ್ನು ಮೂರು ಲಕ್ಷದಿಂದ ಐದು ಲಕ್ಷ ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಬೆಳೆ ಬಿತ್ತನೆ ವೇಳೆ ವೆಚ್ಚದ ಆಧಾರದಲ್ಲಿ ಲಾಭದಾಯಕ ದರ ನಿಗದಿ ಮಾಡುವ ಸಾಧ್ಯತೆ ಇದೆ. ರಾಜ್ಯದ ರೈತರಿಗೆ ನೀಡುವ ಸಹಾಯಧನ ವಿಸ್ತರಣೆ ಮಾಡುವ ಸಾಧ್ಯತೆಯಿದ್ದು, ಒಂದು ಎಕರೆಯಲ್ಲಿ ಯಾವುದಾದರೂ ಬೆಳೆ ಬೆಳೆಯಲು ಎಷ್ಟು ಖರ್ಚಾಗುತ್ತದೆ ಅದಕ್ಕೆ ಎಷ್ಟು ಬೆಂಬಲ ಬೆಲೆ ಕೊಡಬೇಕೆಂಬ ಯೋಜನೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಮಡಿವಾಳ, ಗಾಣಿಗ, ನೇಕಾರ, ಕುಂಬಾರ, ಅಕ್ಕಸಾಲಿಗ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿಗೆ ಅನುದಾನ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಸಾಧ್ಯತೆ ಇದೆ. ನಮ್ಮ ಕ್ಲಿನಿಕ್ ಗಳನ್ನು ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.

ಮಹಿಳಾ ಸಂಘಗಳಿಗೆ ಸ್ತ್ರೀಶಕ್ತಿ ಯೋಜನೆ ಅಡಿ 5 ಲಕ್ಷ ರೂಪಾಯಿ ಹಂಚಿಕೆ, ಸ್ವಸಹಾಯ ಸಂಘಗಳ ಬಡ್ಡಿ ಅಥವಾ ಸಾಲ ಮನ್ನಾ ಮಾಡುವ ಸಾಧ್ಯತೆ ಇದೆ. ಪ್ರಾಥಮಿಕ ಶಿಕ್ಷಣದಲ್ಲೂ ಎನ್‌ಇಪಿ ಅನುಷ್ಠಾನ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡುವ ಸಾಧ್ಯತೆ ಇದೆ. 15,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.