Saturday, 14th December 2024

ಬೈರತಿ ಕೀರ್ತಿಗೆ ಧಕ್ಕೆ ತರುವುದೇ 97 ಕೋಟಿ ಅಕ್ರಮ ಆರೋಪ ?

ಕೆಆರ್ ಪುರದಲ್ಲಿ ಅಕ್ರಮ ಕಾಮಗಾರಿಯದೇ ಸದ್ದು, ಕಾಂಗ್ರೆಸ್ ಗೆ ಸಿಕ್ಕಿದ ಹಳೇಯ ಅಸ್ತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವಾದ ಕೆ.ಆರ್.ಪುರ ಚುನಾವಣಾ ಕಣದಲ್ಲಿ ಆ ಬಾರಿ ಯಾರು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಯಾರು ಹೇಗೆ ಸೋಲುತ್ತಾರೆ ಎನ್ನುವ ಕತೂಹಲ ಆರಂಭವಾಗಿದೆ.

ಏಕೆಂದರೆ, ಕ್ಷೇತ್ರದಲ್ಲಿ ಕಳೆದ ಎರಡ ದಿನಗಳಿಂದೀಚಿಗೆ ಸಚಿವ, ಹಾಲಿ ಶಾಸಕ ಬೈರತಿ ಬಸವರಾಜು ವಿರುದ್ಧದ ಅಕ್ರಮ ಆರೋಪಗಳ ಚರ್ಚೆ ಜೋರಾಗಿದೆ. ಅದರಲ್ಲೂ ಸಚಿವರು ಕ್ಷೇತ್ರದಲ್ಲಿ ಕಾಮಗಾರಿಗಳನ್ನೇ ನಡೆಸದೆ ಸುಮಾರು 97ಕೋಟಿ ರೂಪಾಯಿಗಳ ಅಕ್ರಮ ನಡೆಸಿದ್ದಾರೆ ಎನ್ನುವ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಅವರು ಆರೋಪ ಈಗ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಈ ಬಾರಿ ಬಿಜೆಪಿಯ ಬೈರತಿ ಬಸವರಾಜು ವಿರುದ್ಧ ಎದುರಾಳಿಯೇ ಇಲ್ಲ ಎನ್ನುತ್ತಿದ್ದ ಬೆಂಬಲಿಗರಲ್ಲಿ ಆತಂಕ ಶುರುವಾಗಿದೆ. ಅಷ್ಟೇ ಅಲ್ಲ. ಈ ಚರ್ಚೆಯಿಂದ ಕಾಂಗ್ರೆಸ್ ನ ಡಿ.ಕೆ.ಮೋಹನ್ ಬಾಬುಗೆ ಕೊಂಚ ಬಲಬಂದಂತಾಗಿ ಅವರೀಗ ಕ್ಷೇತ್ರಾದ್ಯಂತ ಪ್ರಚಾರ ಚುರುಕುಗೊಳಿಸಿದ್ದಾರೆ. ಇದೆಲ್ಲಕ್ಕಿಂತ ವಿಶೇಷ ಮೋಹನ್ ಬಾಬು ಅವರು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸಾಧನೆಗಳಿಗಿಂತ ಸಚಿವರ ಆಕ್ರಮಗಳ ಆರೋಪದ ವಿಚಾರ ಗಳನ್ನು ಚರ್ಚೆಸಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಅಕ್ರಮ ಆರೋಪ ?
ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಟ್ಟಡ ನಿರ್ಮಿಸದೆ ಕಾಮಗಾರಿ ನಡೆದಿದೆ ಎಂದು ದಾಖಲಾತಿ ಸೃಷ್ಟಿಸಿ 97 ಕೋಟಿ ರು. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಅಬ್ರಾಹಂ ದೂರು ಸಲ್ಲಿಸಿದ್ದರು. ಕಾಮಗಾರಿಗಳನ್ನು ನಡೆಸದೆ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಎಸಗಲಾಗಿದೆ.

ಯಾವುದೋ ಕಟ್ಟಡಗಳನ್ನು ತೋರಿಸಿ ಹಣ ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಅಬ್ರಾಹಂ ಆರೋಪಿಸಿದ್ದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಕೋಟ್ಯಂತರ ರು. ಹಣ ಮಂಜೂರು ಮಾಡಿಸಿಕೊಂಡು ಕಾಮಗಾರಿ ನಡೆಸದೆ ಎಲ್ಲವೂ ಕಾಗದ ಪತ್ರದಲ್ಲಿಯೇ ಕಟ್ಟಡ ನಿರ್ಮಾಣ ಮಾಡಿಸಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಈಮೂಲಕ 97 ಕೋಟಿ ರು. ವಂಚನೆ ಮಾಡಲಾಗಿದೆ. ಕ್ಷೇತ್ರಕ್ಕೆ ಬಿಬಿಎಂಪಿಗೆ ಸಂಬಂಧಿಸಿದಂತೆ 1883 ಕಾಮಗಾರಿಗಳಿಗೆ 488 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ 97 ಕೋಟಿ ರು. ಕಾಮಗಾರಿ ಮಾಡದೆ ಹಣ ಬಿಡುಗಡೆ ಮಾಡಿಸಿಕೊಳ್ಳ ಲಾಗಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ಕೋರ್ಟ್ ನಲ್ಲಿ ಹೋರಾಟ
ಕ್ಷೇತ್ರದಲ್ಲಿ 373 ಮಂದಿ ಗುತ್ತಿಗೆದಾರರಿದ್ದಾರೆ. 155 ಗುತ್ತಿಗೆದಾರರಿಗೆ ಒಂದು ಗುತ್ತಿಗೆ ನೀಡಿದರೆ 78 ಮಂದಿಗೆ ಎರಡು ಗುತ್ತಿಗೆ ಮತ್ತು 41 ಮಂದಿಗೆ ಮೂರು ಗುತ್ತಿಗೆ ನೀಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ 15 ಗುತ್ತಿಗೆದಾರರು 848 ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ನಾನು ನೀಡಿರುವ ದೂರಿನ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ ಈ ವರೆಗೂ ಎಫ್ ಐ ಆರ್ ದಾಖಲಿಸಿಲ್ಲ. ಹಾಗಂತ ನಾನುು ಸುಮ್ಮನೆ ಕೂರುವು ದಿಲ್ಲ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯಕ್ಕೆ ಹೋರಾಟ ಮಾಡುತ್ತೇನೆ ಎಂದು ಅವರು ಇತ್ತೀಚಿಗೆ ಹೇಳಿದ್ದರು.

*
ಸಚಿವರು ಕ್ಷೇತ್ರದಲ್ಲಿ ಅಕ್ರಮ ನಡೆಸಿರುವುದು ಸ್ಪಷ್ಟವಾಗಿದೆ. ಕ್ಷೇತ್ರದಲ್ಲಿ ದಾಖಲಿಯಲ್ಲಿ ತೋರಿಸಿದ ಅಂಗವಾಡಿ ಮತ್ತು ಶೌಚಾಲಯ ಕಟ್ಟಡಗಳನ್ನು ಹುಡುಕಿದರೆ ಎಲ್ಲಿಯೂ ಸಿಗುವುದಿಲ್ಲ. ಆದರೆ ಅದರ ಹೆಸರಿನಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಇದರಲ್ಲಿ ಸಚಿವರದೇ ಕೈವಾಡ. ಈ ಬಗ್ಗೆ ನಾನು ಹೈಕೋರ್ಟ್ ನಲ್ಲಿ ಹೋರಾಟ ನಡೆಸುತ್ತೇನೆ.

-ಟಿ.ಜೆ.ಅಬ್ರಾಹಂ, ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ