Thursday, 12th December 2024

ಜಾತಿ ಪ್ರಮಾಣಪತ್ರ ನೀಡುವಲ್ಲಿ ನಿರ್ಲಕ್ಷ್ಯ: ನ್ಯಾಯಕ್ಕಾಗಿ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಗೂರ್ಖಾ ಸಮುದಾಯ ಪ್ರವರ್ಗ 1 ರ ಅಡಿ ಅರ್ಹತೆ ಪಡೆದಿದ್ದರೂ ಸಹ ಜಾತಿ ಪ್ರಮಾಣ ಪತ್ರ ನೀಡುವಾಗ ಅಧಿಕಾರಿಗಳು ಪರಮ ನಿರ್ಲಕ್ಷ್ಯ ತೋರುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ನಿರ್ದೇಶನ ನೀಡಬೇಕೆಂದು   ಗುರ್ಖಾಸ್ ವೆಲ್ಪೇರ್ ಆಸೋಸಿಯೇಷನ್ ರಾಜ್ಯಾಧ್ಯಕ್ಷ ಜೋಗ್‍ಮಲ್  ಮನವಿ ಮಾಡಿದ್ದಾರೆ.
ಗೂರ್ಖಾ ಸಮುದಾಯ ಎಂದೊಡೆನೆ ಅಧಿಕಾರಿಗಳು ಅನ್ಯರೆಂದು ಭಾವಿಸಿ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಶತಮಾನಗಳಿಂದಲೂ ಸರ್ಕಾರಿ ಸೌಲಭ್ಯ ಗಳಿಂದ ಸಮುದಾಯ ವಂಚಿತವಾಗಿದ್ದು, ಅವನತಿಯ ಹಾದಿ ಹಿಡಿದಿದೆ. ಆಡಳಿತ ಯಂತ್ರವನ್ನು ಸರಿಪಡಿಸದಿದ್ದಲ್ಲಿ ಗೂರ್ಖಾ ಸಮುದಾಯ ಇನ್ನಷ್ಟು ತೊಂದರೆಗೆ ಸಿಲುಕಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳಿಂದ ಈ ನೆಲದಲ್ಲಿ ಹುಟ್ಟಿ, ಬೆಳೆದು, ಜನರ ಆಸ್ತಿಪಾಸ್ತಿ ರಕ್ಷಣೆಯಲ್ಲಿ ನಿರತವಾಗಿರುವ ಅತಿ ಹಿಂದುಳಿದ ಗೂರ್ಖಾ ಸಮುದಾಯವನ್ನು ಪ್ರವರ್ಗ 1ರ ಜಾತಿಗಳ ಅಡಿ  ಸೇರ್ಪಡೆ ಮಾಡಿದ್ದು, ನಮ್ಮ ಸಮುದಾಯಕ್ಕೆ  ಸಾಮಾಜಿಕ ಮತ್ತು ಶೈಕ್ಷಣಿಕ ಸೌಲಭ್ಯ ಒದಗಿಸಲು ತಕ್ಷಣವೇ ಕ್ರಮ ವಹಿಸಲು ಆದೇಶ ನೀಡಬೇಕು ಎಂದರು.
ಗೂರ್ಖಾ ಸಮುದಾಯ ಸುಮಾರು 40 ಸಾವಿರದಷ್ಟಿದ್ದು, ಇಲ್ಲಿನ ಮಣ್ಣಿನ ಮಕ್ಕಳಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿದ್ದೇವೆ. ಮನೆಗೆಲಸ, ಭದ್ರತಾ ಕೆಲಸ, ಸಚ್ಛತಾ ಕೆಲಸ ಮಾಡಿಕೊಂಡು ಕಡು ಬಡತನದಲ್ಲೇ ಜೀವನ ಮಾಡು ತ್ತಿದ್ದೇವೆ. ಬಡತನ, ಅನಕ್ಷರತೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವು ದನ್ನು ಮನಗಂಡು ರಾಜ್ಯ ಸರ್ಕಾರ ಗುರ್ಖಾ ಜಾತಿಯನ್ನು ಅತಿ ಹಿಂದುಳಿದ ಪ್ರವರ್ಗ- 1 ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ ನಾವು ಸೌಲಭ್ಯದಿಂದ ವಂಚಿತ ರಾಗಿದ್ದೇವೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುತ್ತಿಲ್ಲ. ಚುನಾವಣಾ ಗುರುತಿನ ಚೀಟಿ, ಆಧಾರ್, ವಾಸಸ್ಥಳ ದೃಢೀಕರಣ ಸೇರಿ ಎಲ್ಲಾದಾಖಲೆ ಗಳನ್ನು ನೀಡಿ ದರೂ ಸಹ ನಮ್ಮ ಸಂವಿಧಾನಬದ್ಧ ಮನವಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ತಮ್ಮ ನೋವು ತೋಡಿ ಕೊಂಡರು.
ದೇಶದ ಇತರೆ ರಾಜ್ಯಗಳಲ್ಲಿ ಗುರ್ಖಾ ಜಾತಿ ಪ್ರಮಾಣ ಸೇರಿ ಎಲ್ಲಾ ಸೌಲಭ್ಯ ದೊರೆಯುತ್ತಿದೆ. ನಮ್ಮ ಸಮುದಾಯ ವಿಶ್ವದಲ್ಲೇ ದೇಶ ರಕ್ಷಣೆಯ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ಗುರ್ಖಾ ರೆಜಿಮೆಂಟಿನ ಮೂಲಕ ದೇಶ ಸೇವೆ ಮಾಡುತ್ತಿದೆ ಕರ್ನಾಟಕದಿಂದ ನಮಗೆ ಜಾತಿ ಪ್ರಮಾಣ ಪತ್ರ ದೊರೆಯದೆ  ಮಿಲಿಟರಿ ಸೇವೆಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಆದರೆ ರಾಜೀವ್ ಗಾಂಧಿ ವಸತಿ ನಿಗಮ ಮಾತ್ರ ಕಳೆದ ವರ್ಷದ ಜುಲೈನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಸರ್ಕಾರಿ ಜಮೀನು ಗುರುತಿಸಿ ಗುರ್ಖಾ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ನೀಡಲು ಆದೇಶಿಸಿದೆ. ಆದರೆ ಇನ್ನೂನಿವೇಶನ ದೊರೆತಿಲ್ಲ ಹಾಗೂ ಆದರೆ ಬಹುತೇಕ ಗೂರ್ಖಾ ಸಮುದಾಯದವರು ಶಾಲಾ ದಾಖಲಾತಿ ಹೊಂದಿಲ್ಲ. ಸ್ವಯಂ ಘೋಷಣೆ ಪ್ರಮಾಣ ಪತ್ರದ ಆಧಾರದಲ್ಲಿ ಸರಳವಾಗಿ ಜಾತಿ ಪ್ರಮಾಣಪತ್ರ ನೀಡಲು ಆದೇಶಿಸಬೇಕು, ಸಮಯದಾಯ ಭವನಕ್ಕೆ ಸ್ಥಳ ನೀಡಬೇಕು ಎಂದು ಜೋಗ್‍ಮಲ್ ಮನವಿ ಮಾಡಿದರು.