ಬೆಂಗಳೂರು: ಕಾಫಿ ಪುಡಿಯೊಂದಿಗೆ ಚಿಕೋರಿ ಬೆರೆಸುವ ಪ್ರಕ್ರಿಯೆ ಒಂದು ಕಲಬೆರಕೆಯಾಗಿದೆ. ಆದ್ದರಿಂದ ಕಾಫಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಚಿಕೋರಿಯನ್ನು ನಿಷೇಧಿಸಬೇಕೆಂದು ಚಿಹಾಕೊ ಕಾಫಿ ಸಹಕಾರ ಸಂಗಮ ಸಂಘಟನೆಯ ಸಂಸ್ಥಾಪಕ ಎಸಳೂರು ಉದಯ ಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಅವರಿಗೆ ಇಂದು ಮನವಿ ಸಲ್ಲಿಸಿದರು. ಹಿಂದೆ ಕಾಫಿ ಮಂಡಳಿಯಲ್ಲಿದ್ದ ಭ್ರಷ್ಟರಿಂದ ಚಿಕೋರಿಯನ್ನು ಕಾಫಿ ಪುಡಿಯೊಂದಿಗೆ ಬೆರೆಸುವ ವಂಚನೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದು ಬೆಳೆಗಾರರು ಮತ್ತು ಕಾಫಿ ಗ್ರಾಹಕರಿಬ್ಬರಿಗೂ ಅಪಾರ ಕಷ್ಟ ನಷ್ಟಗಳನ್ನು ತಂದಿದೆ. ಆದ್ದರಿಂದ ಈಗಲಾದರೂ ಕಾಫಿ ಮಂಡಳಿ ಮತ್ತು ಸದಸ್ಯರು ಎಚ್ಚೆತ್ತುಕೊಂಡು ಚಿಕೋರಿಯನ್ನು ನಿಷೇಧಿಸಬೇಕು. ಇದರಿಂದ ಕಾಫಿಯ ಆಂತರಿಕ ಮಾರುಕಟ್ಟೆ ಅಭಿವೃದ್ಧಿಗೆ ಹೆಬ್ಬಾಗಿಲು ತೆರೆದಂತಾಗುತ್ತದೆ. ಅಲ್ಲದೆ ಕಾಫಿ ಪ್ರಿಯ ಗ್ರಾಹಕರಿಗೂ ಪರಿಶುದ್ಧವಾದ ಕಾಫಿ ಪುಡಿ ಲಭ್ಯವಾಗಲು ದಾರಿಮಾಡಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆರೋಗ್ಯದ ದೃಷ್ಟಿಯಿಂದಲೂ ಕಾಫಿ ಪುಡಿಯೊಂದಿಗೆ ಚಿಕೋರಿ ಬೆರೆಸುವುದರಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಚಿಕೋರಿ ಬೆರೆಸಿದ ಕಾಫಿ ಕಷಾಯವು ಕೆಲವೇ ಗಂಟೆಗಳಲ್ಲಿ ಮೇಲ್ಬಾಗದಲ್ಲಿ ಬಿಳಿ ಬಿಳಿಯಾದ ತೆರೆಯು ಬಂದು ಹುಳಿ ಬರಲಾರಂಭಿಸುತ್ತದೆ. ಇದನ್ನು ಕುಡಿದರೆ ವಾಯು ಪ್ರಕೋಪ ಹಾಗೂ ಬುದ್ದಿ ಮಾಂದ್ಯತೆಗಳಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದವರು ಮಾಹಿತಿ ನೀಡಿದ್ದಾರೆ.
ಇದೇ ಶುದ್ಧ ಕಾಫಿ ಪುಡಿಯಿಂದ ಮಾಡಿದ ಕಾಫಿ ಕಷಾಯವು 3 ದಿನಗಳವರೆಗೂ ಹಾಳಾಗದೆ ಇರುತ್ತದೆ. ಇದೆಲ್ಲದರಿಂದ ಆರ್ಯುವೇದ ಆಹಾರ ಪದ್ಧತಿಯ ಮಾರ್ಗದರ್ಶನದಂತೆ ಕಾಫಿ ಪುಡಿಯೊಂದಿಗೆ ಚಿಕೋರಿ ಬೆರಕೆಮಾಡುವುದು ಸಂಯೋಗ ವಿರುದ್ಧ ಪೇಯ ಎಂಬುದು ಸಾಬೀತಾಗುತ್ತದೆ. ಈ ಎಲ್ಲಾ ಸಂಗತಿಗಳನ್ನು ಕಾಫಿ ಮಂಡಳಿಯು ಮನಗಡ್ಡು ಕಾಫಿ ಪುಡಿಯೊಂದಿಗೆ ಚಿಕೋರಿ ಬೆರೆಸುವ ಕಲಬೆರಕೆ ಪ್ರಕ್ರಿಯೆಯನ್ನು ಕೂಡಲೆ ನಿಷೇಧಿಸಬೇಕು ಇಲ್ಲದಿದ್ದಲ್ಲಿ ಚಿಹಾಕೊ ಕಾಫಿ ಸಹಕಾರ ಸಂಗಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ದಶಕಗಳ ಹಿಂದೆ ಕಾಫಿ ಮಂಡಳಿ ತೆಗೆದುಕೊಂಡ ತಪ್ಪು ನಿರ್ಧಾರವು ಬೆಳೆಗಾರರು ಹಾಗೂ ಅಮಾಯಕ ಗ್ರಾಹಕರನ್ನು ಶೋಷಣೆ ಮಾಡಿದ ಅಮಾನ ವೀಯ ನಿರ್ಧಾರವಾಗಿದೆ. ಸದರಿ ವಿಷಯದಲ್ಲಿ ಕಾಫಿ ಮಂಡಳಿಯು ಐತಿಹಾಸಿಕ ನಿರ್ಧಾರವನ್ನು ಕೈಗೊಂಡು ಬಡ ಕಾಫಿ ಬೆಳೆಗಾರರು ಹಾಗೂ ಗ್ರಾಹಕರ ಕ್ಷೇಮಕ್ಕೆ ನಾಂದಿಹಾಡಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.