-ಡಾ. ಸಂತೋಷ್ ಚಿಕ್ಕ್‌ರೆಡ್ಡಿ, ಹಿರಿಯ ಸರ್ಜಿಕಲ್ ಆಂಕೊಲಾಜಿಸ್ಟ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರ, ಹುಬ್ಬಳ್ಳಿ
ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ಹಲವು ಕ್ಯಾನ್ಸರ್ ನಮ್ಮನ್ನು ಕಾಡಲಾರಂಭಿಸಿವೆ. ಅದರಲ್ಲಿ ಇದೀಗ ಕರುಳಿನ ಕ್ಯಾನ್ಸರ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ (Colorectal Cancer) ಕೂಡ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ. ನಮ್ಮ ಪಚನಕ್ರಿಯೆಯನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಕರುಳಿನ ಆರೋಗ್ಯ ಹದಗೆಟ್ಟರೆ ಇಡೀ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಾವು ತಿನ್ನುವ ಆಹಾರ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಕರುಳಿನ ಕ್ಯಾನ್ಸರ್ ಅಭಿವೃದ್ಧಿಗೊಳ್ಳಲಿದೆ. ಕರುಳಿನ ಕ್ಯಾನ್ಸರ್‌ಗೆ ಕಾರಣ ಹಾಗೂ ಅದಕ್ಕೆ ಪರಿಹಾರದ ಕುರಿತು ವೈದ್ಯರು ವಿವರಿಸಿದ್ದಾರೆ.
ಕರುಳಿನ ಕ್ಯಾನ್ಸರ್ ವಯಸ್ಸಾದವರಿಗೆ ಕಂಟಕ
ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕರೆಯಲ್ಪಡುವ ಕರುಳಿನ ಕ್ಯಾನ್ಸರ್, ದೊಡ್ಡ ಕರುಳಿನ (ಕೊಲೊನ್ ಮತ್ತು ಗುದನಾಳ) ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಇದು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರಲಿದೆ. ವಯಸ್ಸಾದಂತೆ ಪಚನಕ್ರಿಯೆ ನಿಧಾನವಾಗುವುದರಿಂದ ಕರುಳಿನ ಆರೋಗ್ಯವೂ ಕ್ಷೀಣಿಸುತ್ತಾ ಬರಲಿದೆ. ಹೀಗಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕರುಳಿನ ಕ್ಯಾನ್ಸರ್‌ನ ನಿಯಮಿತ ಸ್ಕ್ರೀನಿಂಗ್‌ಗಳು ಮತ್ತು ತಪಾಸಣೆಗೆ ಒಳಗಾಗುವುದು ಅತ್ಯವಶ್ಯಕ.
ಈ ಸುದ್ದಿಯನ್ನೂ ಓದಿ | Healthy Milk: ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ವಿಡಿಯೊ ಸಹಿತ ಟಿಪ್ಸ್
ಕುಟುಂಬದ ಇತಿಹಾಸ ಇರುವವರಲ್ಲಿ ಹೆಚ್ಚು
ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚಾಗಿ ಕುಟುಂಬದ ಇತಿಹಾಸ ಹೊಂದಿರುವವರಲ್ಲಿಯೂ ಕಾಣಿಸಿಕೊಳ್ಳಲಿದೆ. ಫ್ಯಾಮಿಲಿ ಅಡೆನೊಮ್ಯಾಟಸ್ ಪಾಲಿಪೊಸಿಸ್ (FAP) ಅಥವಾ ಲಿಂಚ್ ಸಿಂಡ್ರೋಮ್‌ನಂತಹ ಕೆಲವು ಆನುವಂಶಿಕ ಪರಿಸ್ಥಿತಿಗಳು, ರೋಗವನ್ನು ಅಭಿವೃದ್ಧಿ ಪಡಿಸಲಿದೆ. ನಿಮ್ಮ ಕುಟುಂಬದಲ್ಲಿಯೂ ಯಾರಿಗಾದರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರೆ, ನೀವು ಸಹ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಅನುವಂಶಿಕ ಪರೀಕ್ಷೆಗೆ ಒಳಗಾಗುವುದು ಉತ್ತಮ
ಕರುಳಿನ ಕ್ಯಾನ್ಸರ್‌ಗೆ ಇತರೆ ಕಾರಣಗಳೇನು?
ಉರಿಯೂತದ ಕರುಳಿನ ಕಾಯಿಲೆ (IBD), ಟೈಪ್ 2 ಮಧುಮೇಹ ಮತ್ತು ಬೊಜ್ಜು ಮುಂತಾದ ಕೆಲವು ಆರೋಗ್ಯ ಸಮಸ್ಯೆಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕರುಳಿನ ಕ್ಯಾನ್ಸರ್ ಸಾಮಾನ್ಯವಾಗಿ ಆನುವಂಶಿಕ ಮತ್ತು ಪರಿಸರ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ, ಇದು ಕರುಳಿನಲ್ಲಿ ಪಾಲಿಪ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ. ಪತ್ತೆ ಮಾಡದೆ ಬಿಟ್ಟರೆ, ಈ ಪಾಲಿಪ್ಸ್ ಕ್ಯಾನ್ಸರ್ ಆಗಬಹುದು. ಹೀಗಾಗಿ ಕ್ಯಾನ್ಸರ್‌ನ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಕ್ಯಾನ್ಸರ್‌ನ ಲಕ್ಷಣಗಳೇನು?
- ಮಲದಲ್ಲಿನ ರಕ್ತ, ಕಡಿಮೆ ಪ್ರಮಾಣದಲ್ಲಿ ಮಲವಿಸರ್ಜನೆ
- ಕರುಳಿನ ಚಲನೆಗಳಲ್ಲಿನ ಬದಲಾವಣೆಗಳು (ಅತಿಸಾರ ಅಥವಾ ಮಲಬದ್ಧತೆ),
- ಹೊಟ್ಟೆ ನೋವು ಅಥವಾ ಸೆಳೆತ,
- ದೌರ್ಬಲ್ಯ, ಆಯಾಸ,
- ತೂಕ ನಷ್ಟ ಮತ್ತು ಹಸಿವು ಆಗದೇ ಇರುವುದು
- ಕೆಲವು ತೋಟಗಳಿಗೆ ಸಿಂಪಡಿಸುವ ಕೆಲವು ಕೀಟನಾಶ ಕಣಗಳು ದೇಹಕ್ಕೆ ಸೇರುವುದರಿಂದ.
ಕ್ಯಾನ್ಸರ್ ತಡೆಗಟ್ಟಲು ಈ ಅಭ್ಯಾಸವಿರಲಿ
ನಾವು ಪ್ರತಿನಿತ್ಯ ತಿನ್ನುವ ಆಹಾರದಿಂದಲೇ ಕೊಲೊರೆಕ್ಟಲ್ ಕ್ಯಾನ್ಸರ್ ಅಭಿವೃದ್ಧಿ ಹೊಂದಲಿದೆ. ಹೌದು, ಕೆಂಪು ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಹೆಚ್ಚಿನ ಆಹಾರ, ಕಡಿಮೆ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕರುಳಿನ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು. ಜಡ ಜೀವನಶೈಲಿಯು ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಣ್ಣು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು.
ಈ ಸುದ್ದಿಯನ್ನೂ ಓದಿ | Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!
ಹೆಚ್ಚು ಆಯಿಲ್‌ಯುಕ್ತ ಆಹಾರ ಸೇವನೆ, ಜಂಕ್ ಫುಡ್ ಸೇವನೆಯೂ ಸಹ ನಮ್ಮ ಕರುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉತ್ತಮ ಆಹಾರ ಸೇವನೆಯ ಜತೆಗೆ ನಿಯಮಿತ ವ್ಯಾಯಾಮವೂ ಅತ್ಯವಶ್ಯಕ. ವ್ಯಾಯಾಮ, ಯೋಗ, ಧ್ಯಾನ ಇತರೆ ದೈಹಿಕ ಚಟುವಟಿಕೆಯನ್ನು ದಿನದಲ್ಲಿ ಕನಿಷ್ಠ 30 ನಿಮಿಷಗಳು ಮಾಡುವುದರಿಂದ ಈ ಕ್ಯಾನ್ಸರ್‌ನ ಅಪಾಯದಿಂದ ಪಾರಾಗಬಹುದು. ಅನುವಂಶಿಕ ಹಿನ್ನೆಲೆ ಇದ್ದರೂ ಸಹ ಉತ್ತಮ ಜೀವನಶೈಲಿ ಹೊಂದಿದ್ದರೆ, ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಬಹುದು.