ಬೆಂಗಳೂರು: 2023ನೇ ಸಾಲಿನ ಕಾಮೆಡ್-ಕೆ ಯುಜಿಇಟಿ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಟಾಪ್ 10 ರ್ಯಾಂಕುಗಳಲ್ಲಿ ಮೊದಲ ರ್ಯಾಂಕ್ ಸೇರಿ ಐದು ಸ್ಥಾನಗಳನ್ನು ಕರ್ನಾಟಕದ ಐವರು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ನೂರು ರ್ಯಾಂಕ್ನಲ್ಲಿ ಕನ್ನಡಿಗರು 53 ರ್ಯಾಂಕ್ ಪಡೆದಿದ್ದಾರೆ.
ಬೆಂಗಳೂರು ವಿದ್ಯಾರ್ಥಿಗಳಾದ ಎನ್.ನಂದ ಗೋಪಿಕೃಷ್ಣ ಮೊದಲ ರ್ಯಾಂಕ್ ಮತ್ತು ಸಿದ್ದಾರ್ಥ್ ಪಾಮಿದಿ ಮೂರನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೈಸೂರಿನ ಶ್ರೇಯಾ ಪ್ರಸಾದ್ 8ನೇ ರ್ಯಾಂಕ್, ಬೆಂಗಳೂರಿನ ಅರ್ಜುನ್ ಬಿ.ದೀಕ್ಷಿತ್ 9ನೇ ರ್ಯಾಂಕ್ ಮತ್ತು ಮನಿಷ್ ಎಚ್.ಪರಾಶರ್ ಹತ್ತನೇ ರ್ಯಾಂಕ್ನೊಂದಿಗೆ ಟಾಪರ್ಗಳಾಗಿ ಹೊರ ಹೊಮ್ಮಿದ್ದಾರೆ. ಉಳಿದ ಐದು ರ್ಯಾಂಕ್ಗಳು ಹರ್ಯಾಣ, ಕೇರಳ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯದ ವಿದ್ಯಾರ್ಥಿ ಗಳ ಪಾಲಾಗಿವೆ.
ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸೇರಿ ಕಾಮೆಡ್-ಕೆ ಜತೆ ಹೊಂದಾಣಿಕೆ ಮಾಡಿಕೊಂಡಿರುವ ದೇಶದ ವಿವಿಧ 40 ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಒಟ್ಟು 20 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ಮೇ 28ರಂದು 2023ನೇ ಸಾಲಿನ ಕಾಮೆಡ್-ಕೆ ಯುಜಿಇಟಿ ಮತ್ತು ಯೂನಿಗ್ರೇಜ್ ಪರೀಕ್ಷೆ ದೇಶಾದ್ಯಂತ ನಡೆದಿತ್ತು.
ಕರ್ನಾಟಕದ 80 ಕೇಂದ್ರಗಳೂ ಸೇರಿ ದೇಶಾದ್ಯಂತ 179 ನಗರಗಳಲ್ಲಿನ 264 ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ನಡೆದಿತ್ತು. ಈ ಬಾರಿ ಕರ್ನಾಟಕದ 25,244 ವಿದ್ಯಾರ್ಥಿಗಳು ಸೇರಿ ವಿವಿಧ ರಾಜ್ಯಗಳ ಒಟ್ಟು 96,607 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎಲ್ಲ 8,130 ವಿದ್ಯಾರ್ಥಿ ಗಳು ಶೇ. 90 ರಿಂದ ಶೇ. 100 ಫಲಿತಾಂಶದೊಂದಿಗೆ ಉತ್ತಮ ರ್ಯಾಂಕ್ ಪಡೆದಿದುಕೊಂಡಿದ್ದಾರೆ. ಇದರಲ್ಲಿ 2543 ವಿದ್ಯಾರ್ಥಿಗಳು ಕರ್ನಾಟಕದವ ರಾಗಿದ್ದಾರೆ. ಅದೇ ರೀತಿ ರಾಜ್ಯದ 2,157 ಮಂದಿ ಸೇರಿ 7,719 ವಿದ್ಯಾರ್ಥಿಗಳು ಶೇ. 80ರಿಂದ ಶೇ. 90 ಪಡೆದರೆ, 8,036 ವಿದ್ಯಾರ್ಥಿಗಳು ಶೇ. 70 ರಿಂದ ಶೇ. 80 ರಷ್ಟು ಫಲಿತಾಂಶ ಪಡೆದು ಕಾಮೆಡ್ಕೆ ಕೌನ್ಸೆಲಿಂಗ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರತಿ ವಿದ್ಯಾರ್ಥಿಯ ರ್ಯಾಂಕ್ ಪಟ್ಟಿಯು ಕಾಮೆಡ್-ಕೆ ವೆಬ್ಸೈಟ್ https://www.comedk.org ನಲ್ಲಿ ಲಭ್ಯವಿದ್ದು ವಿದ್ಯಾರ್ಥಿಗಳು ತಮ್ಮ ಲಾಗಿನ್ ಬಳಸಿ ಪಡೆದುಕೊಳ್ಳಬಹುದಾಗಿದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.