Thursday, 19th September 2024

Zameer Ahmed Khan: ಅಲ್ಪಸಂಖ್ಯಾತರ ಅಭಿವೃದ್ಧಿಯೇ ಕಾಂಗ್ರೆಸ್‌ ಸರ್ಕಾರದ ಗುರಿ; ಜಮೀರ್‌ ಅಹ್ಮದ್‌‌ ಖಾನ್‌

Zameer Ahmed Khan

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್‌ ಅಹ್ಮದ್‌‌ ಖಾನ್‌ (Zameer Ahmed Khan) ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಿಂದ ಬೆಂಗಳೂರಿನ ಹಜ್ ಭವನದಲ್ಲಿ ಆಯೋಜಿಸಲಾಗಿದ್ದ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ವಿತರಣೆ ಮತ್ತು ನಿಗಮದ ವಿವಿಧ ಯೋಜನೆಯಡಿ ಸಾಲ ಮತ್ತು ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ, 579 ಫಲಾನುಭವಿಗಳಿಗೆ 7.86 ಕೋಟಿ ರೂ. ಮೊತ್ತದ ಸವಲತ್ತುಗಳನ್ನು ವಿತರಿಸಿ, ಬಳಿಕ ಅವರು ಮಾತನಾಡಿದರು.

2013 ರಿಂದ 2018ರವರೆಗಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 400 ಕೋಟಿ ರೂ. ಅನ್ನು ಮೀಸಲಿಡಲಾಗಿತ್ತು. ಅದನ್ನು ಸಿದ್ದರಾಮಯ್ಯ ಅವರು 3150 ಕೋಟಿ ರೂ.ಗೆ ಏರಿಕೆ ಮಾಡಿದ್ದರು. ಈ ಪ್ರಮಾಣವನ್ನು ಮುಂದೆ ಬಂದ ಎಚ್‌ಡಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಕಡಿತಗೊಳಿಸಿದ್ದವು. ಅದಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಆರೋಪಿಸಿದರು.

ನಮ್ಮ ಸಿದ್ದರಾಮಯ್ಯ ಸರ್ಕಾರವು ಐದು ಗ್ಯಾರಂಟಿಗಳ ನಡುವೆಯೂ ಅಲ್ಪಸಂಖ್ಯಾತ ಇಲಾಖೆಗೆ 3,200 ಕೋಟಿ ರೂ.ಗಳನ್ನು ನೀಡಿದ್ದಾರೆ. ಮುಂದಿನ ವರ್ಷ 5 ಸಾವಿರ ಕೋಟಿ ರೂಪಾಯಿಯನ್ನು ನೀಡುತ್ತಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು ಎಂದ ಸಚಿವರು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 1,450 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಇದರಿಂದ 1,300 ಮಕ್ಕಳು ಎಂಬಿಬಿಎಸ್‌ ಶಿಕ್ಷಣ ಪಡೆಯುತ್ತಿದ್ದು, ಶೀಘ್ರವೇ ವೈದ್ಯರಾಗಲಿದ್ದಾರೆ. ವಿದೇಶಕ್ಕೆ ಹೋಗುವ ಮಕ್ಕಳಿಗೆ ನೆರವು ನೀಡಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಹಜ್ ಭವನದಲ್ಲಿ 400 ಐಎಎಸ್, ಐಪಿಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.

1 ರಿಂದ 8ನೇ ತರಗತಿಯವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆಯನ್ನು ಬಿಜೆಪಿಯವರು ನಿಲ್ಲಿಸಿದ್ದರು. ಅದನ್ನು ಮತ್ತೆ ಶುರು ಮಾಡಿ 82 ಕೋಟಿ ರೂ.ಗಳನ್ನು ವಿದ್ಯಾರ್ಥಿ ವೇತನ ನೀಡಲು ಮೀಸಲಿಟ್ಟಿದ್ದೇವೆ. ಚಾಲಕರು ವಾಹನಗಳ ಮಾಲೀಕರು ಆಗಬೇಕು ಎಂದು ಸ್ವಾವಲಂಬಿ ಸಾರಥಿ ಯೋಜನೆ ಶುರು ಮಾಡಿ ಟ್ಯಾಕ್ಸಿ, ಗೂಡ್ಸ್‌ ವಾಹನವನ್ನು ನೀಡುತ್ತಿದ್ದೇವೆ. ಕೆಎಂಡಿಸಿ ಮೂಲಕ ಸಾಲ ಸೌಲಭ್ಯ ಹಾಗೂ ವಾಹನಗಳ ಸೌಲಭ್ಯ ಒದಗಿಸಲಾಗುತ್ತಿದೆ. ಈಗ 1,194 ವಾಹನಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಜಮೀರ್‌ ಅಹ್ಮದ್‌‌ ಖಾನ್‌ ವಿವರಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಅರಣ್ಯ ಹುತಾತ್ಮರು ಮನುಕುಲದ, ಜೀವ ಸಂಕುಲದ ಸಂರಕ್ಷಕರು; ಸಿದ್ದರಾಮಯ್ಯ ಬಣ್ಣನೆ

ಪೌರಾಡಳಿತ ಇಲಾಖೆ ಹಾಗೂ ಹಜ್ ಇಲಾಖೆಯ ಸಚಿವ ರಹೀಂ ಖಾನ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಸಮುದಾಯಕ್ಕೆ ನ್ಯಾಯವನ್ನು ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ ಕಡಿಮೆ ಮಾಡಲಾಗಿತ್ತು. ಆದರೆ, ಈ ಬಾರಿ ಜಮೀರ್‌ ಅಹ್ಮದ್ ಅವರ ಪ್ರಯತ್ನದಿಂದ 3 ಸಾವಿರ ಕೋಟಿ ರೂ. ಗೂ ಹೆಚ್ಚಿನ ಅನುದಾನ ಸಿಕ್ಕಿದೆ. ಬೀದರ್ ಜಿಲ್ಲೆಯಲ್ಲೂ ವಕ್ಫ್ ಅದಾಲತ್ ನಡೆಸಿ, ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌ ಮಾತನಾಡಿ, ಜಮೀರ್‌ ಅಹಮದ್‌ ಖಾನ್‌ ಸಮುದಾಯದ ನಾಯಕರಾಗಿ ಹೊರ ಹೊಮ್ಮಿ ಎಲ್ಲರನ್ನೂ ಜತೆಗೂಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಮುದಾಯ ಒಟ್ಟಿಗೆ ಇದ್ದರೆ ಅದೇ ಶಕ್ತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 177 ಆಟೋ ರಿಕ್ಷಾ, 68 ಟ್ಯಾಕ್ಸಿ, 30 ಗೂಡ್ಸ್ ವಾಹನ ಸೇರಿ 579 ಮಂದಿಗೆ 7.86 ಕೋಟಿ ರೂ. ಮೊತ್ತದ ಸವಲತ್ತು ವಿತರಿಸಲಾಯಿತು.

ಈ ಸುದ್ದಿಯನ್ನೂ ಓದಿ | Microsoft: ಪುಣೆಯಲ್ಲಿ 520 ಕೋಟಿ ರೂ. ಮೌಲ್ಯದ 16 ಎಕ್ರೆ ಖರೀದಿಸಿದ ಟೆಕ್ ದೈತ್ಯ ಮೈಕ್ರೋಸಾಫ್ಟ್

ಈ ಸಂದರ್ಭದಲ್ಲಿ ಮೌಲಾನಾ ಮಕ್ಸುದ್ ಇಮ್ರಾನ್, ಮಾಜಿ ಸಚಿವ ಹಿಂಡಸಗೇರಿ, ಶಾಸಕರಾದ ಇಕ್ಬಾಲ್ ಹುಸೇನ್, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜ, ಬಿಲ್ಕಿಸ್ ಬಾನು, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಕೆಎಂಡಿಸಿ ಅಧ್ಯಕ್ಷ ಬಿ.ಕೆ ಅಲ್ತಾಫ್ ಖಾನ್, ಎಂ.ಡಿ ಮೊಹಮ್ಮದ್ ನಜೀರ್, ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಶಿ ಹಾಗೂ ಇತರರು ಉಪಸ್ಥಿತರಿದ್ದರು.